ಮುಂಬೈ: ದೇಶದ ಅರ್ಧದಷ್ಟು ಎಟಿಎಂಗಳು 2019ರ ಮಾರ್ಚ್ ವೇಳೆಗೆ ಬಂದ್ ಆಗಲಿವೆ ಎಂದು ಎಟಿಎಂ ಉದ್ಯಮ ಒಕ್ಕೂಟ(ಸಿಎಟಿಎಂಐ) ಹೇಳಿದೆ.
ನಿಯಂತ್ರಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಇದರಿಂದಾಗಿ ಎಟಿಎಂ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದ್ದು, ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಿರ್ಧಾರದಿಂದಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಎಂದು ಸಿಎಟಿಎಂಐ ನಿರ್ದೇಶಕ ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.
Advertisement
ಎಷ್ಟು ಎಟಿಎಂಗಳಿವೆ?:
ದೇಶದಲ್ಲಿ ಒಟ್ಟು 2.38 ಲಕ್ಷ ಎಟಿಎಂಗಳಿದ್ದು, ಅವುಗಳಲ್ಲಿ 1.13 ಲಕ್ಷ ಬ್ಯಾಂಕ್ ಬಳಿಯಿದ್ದರೆ, 1 ಲಕ್ಷ ಎಟಿಎಂಗಳು ಬ್ಯಾಂಕ್ ನಿಂದ ದೂರದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 15 ಸಾವಿರ ಎಟಿಎಂಗಳು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸೇರಿವೆ. ಇವುಗಳಲ್ಲಿ ಶೇ. 50 ರಷ್ಟು ಎಟಿಎಂಗಳು ಮುಚ್ಚಲಿವೆ.
Advertisement
Advertisement
ಏಕೆ ಎಟಿಎಂ ಮುಚ್ಚಲಾಗುತ್ತಿದೆ?:
ಎಟಿಎಂಗಳ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್, ಹಣ ಸಾಗಾಣಿಕೆ ವಾಹನ, ಎಟಿಎಂನ ಕ್ಯಾಸೆಟ್ ಸ್ವಾಪ್ ಅಭಿವೃದ್ಧಿ (ಹೊಸ ನೋಟುಗಳನ್ನು ಇಡಲು ಆಗುವಂತೆ ಟ್ರೇಗಳನ್ನು ಮರುಹೊಂದಾಣಿಕೆಗೆ) ಭಾರೀ ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ದೇಶದಲ್ಲಿರುವ ಎಲ್ಲಾ ಎಟಿಎಂಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಹೊರೆ ಆಗಲಿದೆ. ಕೇವಲ ಕ್ಯಾಸೆಟ್ ಸ್ವಾಪ್ ಅಭಿವೃದ್ಧಿಗೆ ಒಟ್ಟು 3.5 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ ಎಂದು ವಿ.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ.
Advertisement
ಗೃಹ ಸಚಿವಾಲಯ ಇತ್ತೀಚೆಗೆ ಸೂಚನೆ ನೀಡಿದಂತೆ ಜಿಪಿಎಸ್, ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ 300 ವಾಹನಗಳ ಖರೀದಿಗೆ 100 ಕೋಟಿ ರೂ. ಅಗತ್ಯವಾಗುತ್ತದೆ. ಅದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಚಾಲಕ ಪ್ರಯಾಣಿಸಬಲ್ಲರು. ಜೊತೆಗೆ ಸಾಫ್ಟ್ ವೇರ್ ಅನ್ನು ವಿಂಡೋಸ್ ಎಕ್ಸ್ ಪಿ ಯಿಂದ ವಿಂಡೋಸ್-10 ಗೆ ಅಭಿವೃದ್ಧಿಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನು ಓದಿ: ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ
ಸಾಫ್ಟ್ ವೇರ್, ಹಾರ್ಡ್ ವೇರ್ ಬದಲಾವಣೆ, ನಿರ್ವಹಣೆಗೆ ಒಂದು ಎಟಿಎಂಗೆ ಪತ್ರಿ ತಿಂಗಳಿಗೆ 1.50 ಲಕ್ಷ ರೂ. ವೆಚ್ಚವಾಗುತ್ತದೆ. ಇದೇ ರೀತಿ ದೇಶದ 2.38 ಲಕ್ಷ ಎಟಿಎಂಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಟಿಎಂ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ದೇಶದಲ್ಲಿರುವ ಎಟಿಎಂಗಳಲ್ಲಿ ಶೇ.10ರಷ್ಟು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ದೇಶದ ಜನಸಂಖ್ಯೆ ಪ್ರಕಾರ ಒಂದು ಲಕ್ಷ ಎಟಿಎಂಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ ಎನ್ನಲಾಗುತ್ತದೆ. 2.38 ಲಕ್ಷ ಎಟಿಎಂಗಳಲ್ಲಿ ಶೇ. 80ರಷ್ಟು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಎಟಿಎಂಗಳು ಮುಚ್ಚಲಿವೆ. ಇದರಿಂದ ಸರ್ಕಾರದ ಆರ್ಥಿಕ ಸೇರ್ಪಡೆ ಪ್ರಯತ್ನದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ. ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಹಣ ಪಡೆಯುವುದು ಕಷ್ಟವಾಗಲಿದೆ ಎಂದು ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ದೇಶದಲ್ಲಿ ಶೇ. 30ರಷ್ಟು ಬ್ಯಾಂಕ್ ಖಾತೆದಾರರು ಮಾತ್ರ ಎಟಿಎಂ ಕಾರ್ಡ್ ಮೂಲಕ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಉಳಿದ ಗ್ರಾಹಕರು ಕಾರ್ಡ್ ಮೂಲಕವೇ ಹಣದ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಎಟಿಎಂಗಳ ಬಳಕೆ ಕಡಿಮೆ ಆಗುತ್ತಿದೆ. ಜೊತೆಗೆ ಡಿಜಿಟಲ್ ಹಣ ವರ್ಗಾವಣೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ. ಈಗಿರುವ ಎಟಿಎಂಗಳನ್ನು ಕಡಿಮೆ ಮಾಡಿ, ನೆಟ್ವರ್ಕ್ ಹಾಗೂ ಮೂಲಸೌಕರ್ಯಗಳ ಸಮಸ್ಯೆ ಬಗೆಹರಿಸಿದರೆ ಉತ್ತಮ ಸೇವೆ ಒದಗಿಸಬಹುದಾಗಿದೆ ಎನ್ನುವ ಉದ್ದೇಶವಿದೆ.
ಅಷ್ಟೇ ಅಲ್ಲದೆ 2020ರ ವೇಳೆ ಎಟಿಎಂ ಮುಕ್ತ ಹಣ ವರ್ಗಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇರುವ ಎಟಿಎಂಗಳ ಸಂಖ್ಯೆ ಕಡಿಮೆ ಮಾಡಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಹೊಸ ಹೆಜ್ಜೆ ಇಡಲಾಗುತ್ತದೆ.
ಜಗತ್ತಿನಲ್ಲಿಯೇ ಅತಿ ಕಡಿಮೆ ಎಟಿಎಂ ಬಳಕೆದಾರರನ್ನು ಭಾರತ ಹೊಂದಿದೆ. ಅಂಕಿ ಅಂಶಗಳ ಪ್ರಕಾರ ಪ್ರತಿ ಒಂದು ಲಕ್ಷ ಜನರಿಗೆ 8.9 ಎಟಿಎಂ ಬಳಕೆಯಾಗುತ್ತಿದೆ. ಅದರಂತೆ ಬ್ರೆಜಿಲ್ನಲ್ಲಿ 110.6, ಥೈಲ್ಯಾಂಡ್ನಲ್ಲಿ 78, ದಕ್ಷಿಣ ಆಫ್ರಿಕಾದಲ್ಲಿ 60 ಮತ್ತು ಮಯನ್ಮಾರ್ ನಲ್ಲಿ 56.4 ಬಳಕೆಯಾಗುತ್ತಿದೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv