ಗಣೇಶ ಚತುರ್ಥಿಯನ್ನು ದೇಶದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಂತೆ ಗಣೇಶನೂ ಸಹ ವಿಶ್ವ ಆರಾಧ್ಯನಾಗಿದ್ದು, ಒಂದೊಂದು ಭಾಗಗಳಲ್ಲಿ ಒಂದೊಂದು ವಿಶೇಷತೆಯಲ್ಲಿ ನೆಲೆಸಿದ್ದಾನೆ. ಅದರಂತೆ ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿ (Banavasi Madhukeshwara Temple) ಅರ್ಧ ಗಣಪತಿಯನ್ನು (Half Ganesha idol) ಪ್ರತಿಷ್ಠಾಪಿಸಲಾಗಿದೆ. ಈ ವಿಗ್ರಹ ತನ್ನದೇ ಆದ ವಿಶೇಷತೆ ಹೊಂದಿದೆ.
ಇದು ನೋಡಲು ಭಗ್ನಗೊಂಡ ಗಣಪತಿಯ ವಿಗ್ರಹದಂತೆ ಕಾಣುತ್ತದೆ. ಆದರೆ, ಇದು ಭಗ್ನ ವಿಗ್ರಹವಲ್ಲ. ಬದಲಾಗಿ, ಗಣಪತಿಯ ಪತ್ನಿಯರಾದ ಸಿದ್ಧಿ – ಬುದ್ಧಿಯನ್ನು ಮೂರ್ತಿಯ ಭಾಗದಿಂದ ತೆಗೆಯುವ ಮೂಲಕ ಗಣೇಶನನ್ನು ಬ್ರಹ್ಮಚಾರಿಯನ್ನಾಗಿ ತೋರಿಸಲಾಗಿದೆ. ಗಣಪತಿಯ ಪತ್ನಿಯರಾದ ಸಿದ್ಧಿ – ಬುದ್ಧಿಯನ್ನು ಕಾಶಿಯ ಕಾಲಭೈರವನ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾದರೆ, ಗಣಪತಿಯ ಬ್ರಹ್ಮಚಾರಿ ಭಾಗವನ್ನು ಬನವಾಸಿಯಲ್ಲಿ ಪ್ರತಿಷ್ಠಾನೆಯನ್ನು ಮಾಡಲಾಗಿದೆ.
ಗಣಪತಿ ಅಂದರೆ ನೆನಪಿಗೆ ಬರೋದೆ ಆನೆ ಸೊಂಡಿಲಿನ ಮುಖ. ನಾಲ್ಕು ಕೈ, ಎರಡು ದೊಡ್ಡದಾದ ಕಿವಿ. ಆದರೆ ಇಲ್ಲಿ ಸಂಪೂರ್ಣ ಭಿನ್ನವಾಗಿರುವ ಗಣಪನನ್ನು ನಾವು ಕಾಣಬಹುದಾಗಿದೆ. ಇಲ್ಲಿರೋ ಗಣಪತಿಗೆ ಸೊಂಡಿಲು, ಮುಖ, ಹೊಟ್ಟೆಭಾಗ ಎಲ್ಲವೂ ಅರ್ಧವಾದರೆ, ಒಂದು ಕಿವಿ, ಒಂದು ಕಾಲು ಹಾಗೂ ಎರಡು ಕೈಗಳಷ್ಟೇ ಇವೆ. ಇದು ಯಾವುದೋ ವಿದೇಶಿ ದಾಳಿಕೋರರ ದಾಳಿಯಿಂದ ತುತ್ತಾದ ದೇವರ ಮೂರ್ತಿಯಲ್ಲ. ಬದಲಿಗೆ ಈ ಪುರಾತನ ಕಟ್ಟಡದಲ್ಲಿರೋ ಈ ಗಣಪತಿ ಇರೋದು ಹೀಗೆ. ಇಲ್ಲಿರೋ ವಿಘ್ನ ವಿನಾಯಕನ ವಿಶೇಷತೆಯೇ ಅಂತಹದ್ದು.
ಭಕ್ತರಿಗೆ ಸದಾ ಕಾಲ ಗಣಪನ ದರ್ಶನ ಭಾಗ್ಯ
ಇಲ್ಲಿ ಗಣಹೋಮದಂತಹ ಹೋಮ-ಹವನಗಳಿಂದ ಹಿಡಿದು ಕುಂಕುಮಾರ್ಚನೆವರೆಗೆ ಮಾಡಲಾಗುವ ಸರ್ವಸೇವೆಗಳನ್ನು ಮಾಡಲಾಗುತ್ತದೆ. ಆದರೆ ಈ ದೇವಾಲಯದಲ್ಲಿ ಏಕಕಾಲದ ಪೂಜೆ ಮಾತ್ರ ಜರುಗುತ್ತವೆ. ಬೆಳಿಗ್ಗೆ ಮಡಿಯಲ್ಲಿ ಪ್ರಥಮ ವಂದಿತನಿಗೆ ಪೂಜೆ ಮಾಡಿ ಬಾಗಿಲು ಹಾಕಿದರೆ, ಮತ್ತೆ ತೆರೆಯುವುದು ಮಾರನೇ ದಿವಸ ಬೆಳಿಗ್ಗೆಯೇ. ಆದರೆ ಇಲ್ಲಿ ಗರ್ಭಗುಡಿಗೆ ಬಾಗಿಲಿಲ್ಲವಾದ್ದರಿಂದ ದರ್ಶನ ಯಾವಾಗ ಬೇಕಿದ್ದರೂ ಸಾಧ್ಯವಾಗುತ್ತೆ.
ಒಟ್ಟಿನಲ್ಲಿ ಈಶ್ವರ ಅರ್ಧನಾರೀಶ್ವರ ಎಂಬ ಹೆಸರು ಪಡೆದಿದ್ದರೆ, ಬನವಾಸಿಯ ಈ ಗಣಪ ಅರ್ಧ ಶರೀರದ ಗಣಪತಿ ಎಂಬ ಹೆಸರಿಗೆ ಪಾತ್ರನಾಗಿ ಅರಸಿ ಬಂದ ಭಕ್ತರ ಹರಸುತ್ತಿದ್ದಾನೆ.