ಉಡುಪಿ: ಜಿಲ್ಲೆಯ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸಚಿವ ಸ್ಥಾನ ನೀಡದ್ದಕ್ಕೆ ಹಾಲಾಡಿ ಬೆಂಬಲಿಗರ ಆಕ್ರೋಶ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೈಕಮಾಂಡ್ ಮತ್ತು ಪಕ್ಷದ ವರಿಷ್ಟರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾಭಿಮಾನಕ್ಕೆ ಬೆಲೆ ಇಲ್ಲದಂತಾಗಿದೆ. ಐದು ಬಾರಿ ಜನರಿಂದ ಗೆದ್ದವರಿಗೆ ಈವರೆಗೆ ಯಾವ ಸ್ಥಾನ ಮಾನವನ್ನು ಕೊಟ್ಟಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕರಾವಳಿಯ ಬಂಟ ಸಮುದಾಯಕ್ಕೆ ಬಿಜೆಪಿ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ಪೋಸ್ಟ್‍ಗಳು ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಹಾಲಾಡಿಗೆ ಬುಲಾವ್ ನೀಡಿಲ್ಲ. ಸೌಜನ್ಯಕ್ಕೂ ಪಕ್ಷದ ಹಿರಿಯರು, ನಾಯಕರು ಮಾತನಾಡಿಸಿಲ್ಲ ಎಂದು ಶ್ರೀನಿವಾಸ ಶೆಟ್ಟಿ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಕುಂದಾಪುರದ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕಾಡೂರು ಮಾತನಾಡಿ, ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದು, ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದು ಖುಷಿಯಾಗಿದೆ. ಆದರೆ ಐದು ಬಾರಿ ಶಾಸಕರಾಗಿ ಗೆದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಕಳೆದ ಬಾರಿ ಸಚಿವ ಸ್ಥಾನ ಕೈ ತಪ್ಪಿತ್ತು. ಈ ಬಾರಿಯ ಮೊದಲ ಪಟ್ಟಿಯಲ್ಲೂ ಹೆಸರಿಲ್ಲ. ಕ್ಷೇತ್ರದ ಜನ ಹಾಲಾಡಿಯವರು ಈ ಬಾರಿಯಾದರೂ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವು. 2ನೇ ಪಟ್ಟಿಯಲ್ಲಿ ಶ್ರೀನಿವಾಸ ಶೆಟ್ಟಿಯವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಪಕ್ಷದ ಆಂತರಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.