ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ.
ನಗರದ ಮಲ್ಲೇಶ್ವರಂ, ಬಿಇಎಲ್ ಸರ್ಕಲ್, ಯಶವಂತಪುರ, ದಾಸರಹಳ್ಳಿ, ತಾವರೆಕೆರೆ, ವಿದ್ಯಾರಣ್ಯಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ತೆಂಗಿನ ಮರ ಹಾಗೂ ವಿದ್ಯುತ್ ಕಂಬ ಧರೆಗೆ ಬಿದ್ದಿದ್ದು, ಇನ್ನೋವಾ ಕಾರು ಮತ್ತು ಆಟೋ ಜಖಂ ಗೊಂಡಿದೆ. ಅದೃಷ್ಟವಶಾತ್ ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆ ಅಂತರದಲ್ಲಿ ಆಪಾಯದಿಂದ ಪಾರಾಗಿದ್ದಾರೆ. ನಗರದ ವಿದ್ಯಾರಣ್ಯಪುರ, ಯಶವಂತಪುರ ಸೋಪ್ ಫ್ಯಾಕ್ಟರಿ ಬಳಿ ಎರಡು ತೆಂಗಿನ ಮರಗಳು ಧರೆಗುರುಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
ಕೆಆರ್ ಪುರಂ ನಲ್ಲಿ ಭಾರೀ ಮಳೆಯ ಪರಿಣಾಮ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಎಎಸ್ ಆರ್ ಲೇಔಟ್ ರಾಜಕಾಲುವೆಯ ನೀರು ಉಕ್ಕಿ ಹರಿದ ಪರಿಣಾಮ ವಾರ್ಡ್ ನಂ 52 ಮತ್ತು 53 ರ ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನುಗ್ಗಿದೆ. ಮನೆಯಿಂದ ಕೊಳಚೆ ನೀರು ಹೊರಹಾಕಲು ಹೆಂಗಸರು, ಮಕ್ಕಳು ಪರದಾಟ ನಡೆಸಿದ್ದಾರೆ. ಸಂಜೆ ವೇಳೆಗೆ ಗಾಳಿ ಮಳೆಯ ಪರಿಣಾಮದಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.
ಹವಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿನಿಂದ ಹೊರಡಬೇಕಿದ್ದ ಕೆಲ ವಿಮಾನಗಳು ರದ್ದಾಗಿದ್ದು, ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ರಾಜ್ಯದ ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೇಸಗೆಯ ಬಿಸಿ ಎದುರಿಸುತ್ತಿದ್ದ ರೈತರ ಮುಖದಲ್ಲಿ ಮಳೆಯ ಸಿಂಚನ ಮಂದಹಾಸ ಮೂಡಿಸಿದೆ.
https://www.youtube.com/watch?v=4FHWCnw9k2Q