– ಇಂತಹ ಪರಿಸ್ಥಿತಿ ಹಿಂದೆಂದೂ ಎದುರಿಸಿರಲಿಲ್ಲ
– ಇಷ್ಟು ದೊಡ್ಡ ಶಬ್ಧವನ್ನು ಜೀವನದಲ್ಲಿ ಕೇಳಿಲ್ಲ
ಬೆಂಗಳೂರು: ಅಮ್ಮ ಕರೆ ಮಾಡಿದ್ದರಿಂದ ಭಾರೀ ಅನಾಹುತದಿಂದ ಪಾರಾದೆ ಎಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರತ್ಯಕ್ಷದರ್ಶಿ ಟೆಕ್ಕಿಯೊಬ್ಬರು ವಿವರಿಸಿದ್ದಾರೆ.
ಬಿಹಾರದ ಪಾಟ್ನಾ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಕುಮಾರ್ ಅಲಂಕೃತ್ (Techie Kumar Alankrit) ಎಂಬವರು ಈ ಭಯಾನಕ ಕಥೆಯನ್ನು ತನ್ನ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ. ಈ ರೀತಿಯ ಪರಿಸ್ಥಿತಿಯನ್ನು ಹಿಂದೆಂದೂ ನಾನು ಎದುರಿಸಿರಲಿಲ್ಲ ಎಂದು ಹೇಳಿರುವ ಟೆಕ್ಕಿ, ಕೆಫೆಯಲ್ಲಿ ನಡೆದ ಸ್ಫೋಟದ ಮೊದಲ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಟೆಕ್ಕಿ ಬಿಚ್ಚಿಟ್ಟ ಭಯಾನಕ ಸತ್ಯ: ವರ್ಕ್ ಫ್ರಂ ಹೋಂ ಮಾಡುತ್ತಿದ್ದ ಅಲಂಕೃತ್ ಶುಕ್ರವಾರ ಬ್ರೂಕ್‌ಫೀಲ್ಡ್‌ನಲ್ಲಿರುವ ತನ್ನ ಬಾಡಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕೆಫೆಗೆ ಮಧ್ಯಾಹ್ನ 12.30 ರ ಸುಮಾರಿಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಘಟನೆಯ ಭಯಾನಕ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟ ಪ್ರಕರಣ – ಇದುವರೆಗೆ ಯಾರನ್ನೂ ಬಂಧಿಸಿಲ್ಲ: ಪೊಲೀಸ್ ಆಯುಕ್ತ ಸ್ಪಷ್ಟನೆ
ಕೆಫೆಯೊಳಗೆ ಏನೇನಾಯ್ತು?: ನಾನು ಒಂದು ಇಡ್ಲಿ ಮತ್ತು ಒಂದು ದೋಸೆಯನ್ನು ಆರ್ಡರ್ ಮಾಡಿದ್ದೆ. ಅಂತೆಯೇ ಇಡ್ಲಿ ತಿಂದು ಮುಗಿಸಿ ದೋಸೆ ಕೌಂಟರ್‌ಗೆ ಹೋದೆ. ಸಾಮಾನ್ಯವಾಗಿ ದೋಸೆ ಪಿಕಪ್ ಪಾಯಿಂಟ್‌ನ ಬಳಿ ಇರುವ ಪ್ರದೇಶದಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಇಂದು (ಶುಕ್ರವಾರ) ನಾನು ದೋಸೆಯನ್ನು ತೆಗೆದುಕೊಳ್ಳುತ್ತಿದ್ದಂತೆ ನನ್ನ ತಾಯಿ ಮೊಬೈಲ್ ಕರೆ ಮಾಡಿದರು. ಕೆಫೆಯೊಳಗೆ ತುಂಬಾ ಗದ್ದಲ ಇದ್ದುದರಿಂದ ನಾನು ಹೊರಗಡೆ ಇರುವ ಸಿಟ್ಟಿಂಗ್ ಏರಿಯಾಕ್ಕೆ ಹೋಗಿ ತಾಯಿಯೊಂದಿಗೆ ಮಾತನಾಡುತ್ತಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ಹಿಂದಿನಿಂದ ಜೋರಾಗಿ ಬಡಿದ ಶಬ್ದ ಕೇಳಿಸಿತು ಎಂದರು.
ಕಿವಿಯಿಂದ ರಕ್ತ ಸುರಿಯುತ್ತಿತ್ತು: ಶಬ್ಧ ಕೇಳಿಸುತ್ತಿದ್ದಂತೆಯೇ ಅಪಾರ ಸಂಖ್ಯೆಯ ಗ್ರಾಹಕರು ಹೊರಗೆ ಓಡಿ ಬಂದಿದ್ದರು. ಜನ ದಿಕ್ಕಾಪಾಲಾದರು. ಇಷ್ಟು ದೊಡ್ಡ ಶಬ್ದವನ್ನು ನಾನು ನನ್ನ ಜೀವನದಲ್ಲಿ ಕೇಳಿರಲಿಲ್ಲ. ಕಿಚನ್ ಏರಿಯಾದಿಂದ ಸಾಕಷ್ಟು ಹೊಗೆ ಬರುವುದನ್ನು ನಾನು ನೋಡಿ ಗಾಬರಿಗೊಂಡೆ. ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಹಲವರ ಬಟ್ಟೆ ಸುಟ್ಟು ಕರಕಲಾಗಿದ್ದು, ಕೆಲವರ ಕಿವಿಯಿಂದ ರಕ್ತ ಸುರಿಯುತ್ತಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ: ಯತ್ನಾಳ್
ಮಹಿಳೆಯೊಬ್ಬರ ಬಟ್ಟೆ ಹಿಂದಿನಿಂದ ಹರಿದಿದೆ. ಇನ್ನೊಬ್ಬ ವ್ಯಕ್ತಿಯ ತಲೆಯಿಂದ ರಕ್ತ ಸುರಿಯುತ್ತಿತ್ತು. 80ರ ಹರೆಯದ ಇಬ್ಬರು ಹಿರಿಯ ಮಹಿಳೆಯರಿಗೆ ರಕ್ತಸ್ರಾವವಾಗುತ್ತಿತ್ತು. ಗಾಯಾಳುಗಳಿಗೆ ಸಾರ್ವಜನಿಕರು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದರು. ರಾಮೇಶ್ವರಂ ಕೆಫೆಯ ಐದಕ್ಕೂ ಹೆಚ್ಚು ನೌಕರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಅಳುತ್ತಿದ್ದರು. ದೊಡ್ಡ ಶಬ್ದದಿಂದಾಗಿ ಅನೇಕ ಜನರು ತಮ್ಮ ಕಿವಿಗಳನ್ನು ಹಿಡಿದುಕೊಂಡಿದ್ದರು ಎಂದರು.
ಕೂಡಲೇ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ. ಜನರ ಮುಖದಲ್ಲಿದ್ದ ಭಯವನ್ನು ನಾನು ನೋಡಿದೆ. ಏನಾಯಿತು ಎಂಬ ಆಘಾತದಿಂದ ಅವರು ಅಳುತ್ತಿದ್ದರು ಎಂದು ಹೇಳಿದರು.
ತಾಯಿಯೇ ದೇವರು: ಇಂದು ನನ್ನ ತಾಯಿಯ ಕಾರಣದಿಂದ ನಾನು ಉಳಿಸಿಕೊಂಡಿದ್ದೇನೆ. ಆ ಸಮಯದಲ್ಲಿ ಅವರ ಕರೆ ಬರದಿದ್ದರೆ, ನಾನು ಸಾಮಾನ್ಯವಾಗಿ ನಾನು ಪ್ರತಿ ಬಾರಿ ಕುಳಿತುಕೊಳ್ಳುವ ಕೌಂಟರ್ ಬಳಿ ಕುಳಿತು ಗಾಯಗೊಳ್ಳುತ್ತಿದ್ದೆ. ಆದ್ದರಿಂದ ಭಾರೀ ಅವಘಡದಿಂದ ಪಾರು ಮಾಡಿದ ನನ್ನ ತಾಯಿ ದೇವರಿಗೆ ಸಮಾನ ಎಂದು ಅಲಂಕೃತ್ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.