– ಪ್ರತಿ ಬಾರ್ ಮುಂದೆ ಅಂಬುಲೆನ್ಸ್ ಸೇವೆ ನೀಡಬೇಕು, ಬಾಟಲಿಗೆ ವಿಮೆ ಕೊಡಬೇಕು
– `ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ’ ಘೋಷವಾಕ್ಯದೊಂದಿಗೆ ಪ್ರತಿಭಟನೆ
– ಮದ್ಯಪಾನ ಪ್ರಿಯರ ಬೇಡಿಕೆ ಕೇಳಿ ಸಚಿವರು ಸುಸ್ತೋಸುಸ್ತು
ಬೆಳಗಾವಿ: ಮದ್ಯಪಾನ ಪ್ರಿಯರಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ (Habitual Drinkers Association) ಸದಸ್ಯರು ಬೆಳಗಾವಿಯಲ್ಲಿ (Belagavi) ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. `ನಿತ್ಯ ದುಡಿ, ಸತ್ಯ ನುಡಿ ಸ್ವಲ್ಪ ಕುಡಿ ಮನೆಗೆ ನಡಿ’ ಘೋಷವಾಕ್ಯದೊಂದಿಗೆ ಮದ್ಯಪಾನ ಪ್ರಿಯರು ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ಪರವಾಗಿ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಭಟನಾಕಾರರ ಬೇಡಿಕೆಗಳನ್ನ ಆಲಿಸಿ, ಮನವಿ ಸ್ವೀಕರಿಸಿದ್ದಾರೆ. ಈ ವೇಳೆ ಬೇಡಿಕೆಗಳನ್ನ ಕೇಳಿ ಫುಲ್ ಸುಸ್ತಾಗಿದ್ದಾರೆ. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ
ಮದ್ಯಪಾನ ಪ್ರಿಯರ ಬೇಡಿಕೆಗಳು ಏನೇನು?
ಪ್ರತಿವರ್ಷ ಡಿಸೆಂಬರ್ 31ರ ದಿನವನ್ನು ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಣೆ ಮಾಡಬೇಕು. ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್‌ನಲ್ಲಿ 50% ರಿಯಾಯಿತಿ ನೀಡಬೇಕು. ʻಕುಡುಕʼ ಎಂಬ ಪದಬಳಕೆ ನಿಷೇಧ ಮಾಡಬೇಕು, ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ 10% ಅನುದಾನ ನೀಡಬೇಕು. ಪ್ರತಿ ಬಾಟಲಿಗೆ ವಿಮೆ (Insurance) ನೀಡಬೇಕು, ಪ್ರತಿ ಬಾರ್ ಮುಂದೆ ಅಂಬುಲೆನ್ಸ್ ಸೇವೆ ನೀಡಬೇಕು. ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಮಾಡಬೇಕು ಎಂದು ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್ ಅನುಮತಿ
ಮದ್ಯಪಾನ ಪ್ರಿಯರ ಆರೋಗ್ಯ ಹಾಳಾಗುತ್ತಿದೆ. ಲಿವರ್ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ಬಿಲ್ ಪಾವತಿಸಲಾಗದೇ ಮರಣ ಹೊಂದುವ ಪರಿಸ್ಥಿತಿ ಬರುತ್ತಿದೆ. ಆದ್ದರಿಂದ ಆರೋಗ್ಯ ಸಮಸ್ಯೆಗಳಿಂದ ಆಗುವ ಖರ್ಚನ್ನು ಸರ್ಕಾರವೇ ಭರಿಸಬೇಕು. ಮದ್ಯಪಾನ ಪ್ರಿಯರಿಂದ ವಾರ್ಷಿಕವಾಗಿ 36,000 ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತಿದೆ. ಕುಡುಕರಿಗೆ ಪ್ರತ್ಯೇಕ ನಿಧಿ ಸ್ಥಾಪಿಸಿ ಆದಾಯದ 10% ಹಣವನ್ನ ನಿಧಿಗೆ ಮೀಸಲಿಡಬೇಕು. ಮದ್ಯಪಾನ ಪ್ರಿಯರು ಮೃತಪಟ್ಟ ಸಂದರ್ಭದಲ್ಲಿ 10 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು