ಎಚ್1ಎನ್1 ಮತ್ತೆ ಸದ್ದು ಮಾಡುತ್ತಿದೆ. ಸರ್ಕಾರಗಳು ಸಾಕಷ್ಟು ಎಚ್ಚರಿಕೆಗಳನ್ನು ಕೈಗೊಂಡರೂ ಮತ್ತಷ್ಟು ಜನರಿಗೆ ಈ ಸೋಂಕು ತಗಲುತ್ತಿದೆ. ಹೀಗಾಗಿ ಇಲ್ಲಿ ಏನಿದು ಹಂದಿ ಜ್ವರ? ಹೇಗೆ ಬರುತ್ತದೆ? ಬಂದ ಮೇಲೆ ಏನು ಮಾಡಬೇಕು ಎನ್ನುವ ಬಗ್ಗೆ ವಿವರಣೆಯಲ್ಲಿ ನೀಡಲಾಗಿದೆ.
ಏನಿದು ಎಚ್1ಎನ್1?
ಮಲೇರಿಯಾ ಜ್ವರ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುವುದು ನಿಮಗೆ ಗೊತ್ತಿರಬಹುದು. ಆದರೆ ಹಂದಿಜ್ವರ ಸೊಳ್ಳೆಯಿಂದ ಬರುವುದಿಲ್ಲ. ಒಂದು ವೈರಾಣುವಿನಿಂದ ಈ ಜ್ವರ ಬರುತ್ತದೆ.ಈ ವೈರಸ್‍ಗೆ ಎಚ್1ಎನ್1 ಎಂದು ಕರೆಯುತ್ತಾರೆ.
Advertisement
ಹಂದಿ ಜ್ವರ ಎಂದು ಕರೆಯೋದು ಯಾಕೆ?
ಈ ಎಚ್1ಎನ್1 ವೈರಾಸ್ ಮೊದಲು ಹಂದಿಗಳ ಶ್ವಾಸಕೋಶಕ್ಕೆ ತಗಲಿ ನಂತರ ಮನುಷ್ಯನಿಗೆ ಹರಡಿದೆ ಎಂದು ಶಂಕಿಸಿ ಈ ರೋಗಕ್ಕೆ ‘ಹಂದಿ ಜ್ವರ’ ಎಂದು ಕರೆಯಲಾಗುತ್ತಿದೆ.
Advertisement
ಮೊದಲು ಹಂದಿ ಜ್ವರ ಪತ್ತೆಯಾಗಿದ್ದು ಎಲ್ಲಿ?
2009ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಮೆರಿಕ ಗಡಿಯಲ್ಲಿರುವ ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ನಗರದಲ್ಲಿ ಹಂದಿ ಜ್ವರ ಮೊದಲು ಕಾಣಿಸಿಕೊಂಡಿತು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‍ನಲ್ಲಿ ಪತ್ತೆಯಾಯಿತು.
Advertisement
ಮಾನವರಿಗೆ ಹಂದಿ ಜ್ವರ ಬರುತ್ತಾ?
ಹಂದಿಯಿಂದ ಮಾನವನಿಗೆ ಜ್ವರ ಹರಡುವುದಿಲ್ಲ. ಆದರೆ ಸೋಂಕು ತಗಲುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಹಂದಿಗಳ ಒಡನಾಟ ಹೆಚ್ಚಿದ್ದರೆ ಬೇಗನೆ ಸೋಂಕು ಹರಡುತ್ತದೆ. ಮೆಕ್ಸಿಕೋ ನಗರದಲ್ಲಿ ಹಂದಿ ಸಾಕಾಣೆ ಮಾಡುವ ಮಂದಿಗೆ ಮೊದಲು ಸೋಂಕು ತಗಲಿ ನಂತರ ಈ ಸೋಂಕು ವಿಶ್ವಕ್ಕೆ ಪಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.
Advertisement
ಹಂದಿ ಜ್ವರ ಹೇಗೆ ಬರುತ್ತೆ? ಬಂದ ಮೇಲೆ ಏನಾಗುತ್ತೆ?
ಈ ವೈರಸ್ ಮೊದಲು ಮೂಗು ಅಥವಾ ಬಾಯಿಯ ಮೂಲಕ ನಮ್ಮ ದೇಹಕ್ಕೆ ಲಗ್ಗೆ ಇಡುತ್ತದೆ. ಲಗ್ಗೆ ಇಟ್ಟ ವೈರಸ್ ರಕ್ತದಲ್ಲಿ ಸಂತಾನೋತ್ಪತಿ ಮಾಡುತ್ತದೆ. ಇದಾದ ಬಳಿಕ ಮೊದಲು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಸಣ್ಣ ಜ್ವರ ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಈ ಜ್ವರದಲ್ಲಿ ಮೊದಲು ಚಳಿ, ಗಂಟಲುರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ, ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ದಿಢೀರ್ ಆಗಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಹೋಗುವುದು ಉತ್ತಮ.
ಜ್ವರ ಬಂದಿದೆ ಎಂದು ತಿಳಿಯೋದು ಹೇಗೆ?
ಈ ಮೇಲಿನ ಲಕ್ಷಣ ಕಂಡುಬಂದವರು ಹೆದರುವ ಅಗತ್ಯವಿಲ್ಲ. ಆಸ್ಪತ್ರೆಗೆಂದು ಪರೀಕ್ಷೆಗೆ ತೆರಳಿದ ಸೋಂಕು ಪೀಡಿತ ಶಂಕೆ ಹೊಂದಿರುವ ವ್ಯಕ್ತಿಗಳ ಮೂಗಿನ ಸ್ರಾವ ಅಥವಾ ಉಗುಳಿನ ಮಾದರಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಹಂದಿಜ್ವರ ಬಂದಿದೆಯೋ ಅಥವಾ ಬಂದಿಲ್ಲವೋ ಎನ್ನುವುದನ್ನು ತಿಳಿಸುತ್ತಾರೆ.
ಹಂದಿಜ್ವರ ಬಂದ ಮೇಲೆ ಏನ್ ಮಾಡಬೇಕು?
ಹಂದಿ ಜ್ವರ ಬಂದವರು ಮೊದಲು ಮಾಡಬೇಕಾದ ಕೆಲಸ ಮಾಸ್ಕ್ ಧರಿಸುವುದು. ಮಾಸ್ಕ್ ಧರಿಸುವುದರಿಂದ ವೈರಾಣು ಬೇರೆಯವರಿಗೆ ಹರಡುವುದನ್ನು ತಡೆಯಬಹುದು. ಇದರ ಜೊತೆ ರೋಗಿಯ ಹತ್ತಿರವೇ ಓಡಾಟ ನಡೆಸುವ ವ್ಯಕ್ತಿಗಳೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ರೋಗಿಗಳು ಹೆಚ್ಚು ಹೆಚ್ಚು ಬಿಸಿ ನೀರನ್ನು ಸೇವಿಸಬೇಕಾಗುತ್ತದೆ. ಮಕ್ಕಳು, ಹಿರಿಯ ವ್ಯಕ್ತಿಗಳು, ಗರ್ಭಿಣಿಯರಲ್ಲಿ ರೋಗ ನೀರೋಧಕ ಶಕ್ತಿ ಕಡಿಮೆ ಇರುವ ಕಾರಣ ಇವರು ರೋಗಿಗಳು ಇರುವ ಕೊಠಡಿಯನ್ನು ಪ್ರವೇಶಿಸದೇ ಇರುವುದು ಉತ್ತಮ.
ಸಾವು ಖಚಿತವೇ?
ಹಂದಿ ಜ್ವರ ಬಂದವರೆಲ್ಲ ಭಯ ಪಡುವ ಅಗತ್ಯವಿಲ್ಲ. ಈ ಜ್ವರ ಪೀಡಿತರಿಗೆ ವೈದ್ಯರು ಟ್ಯಾಮಿಫ್ಲೂ ಮಾತ್ರೆಯನ್ನು ನೀಡುತ್ತಾರೆ. ಈ ಮಾತ್ರೆಯ ರಿಟೇಲ್ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಆದರೆ ಕೆಲ ವೈದ್ಯರು ಅಕ್ರಮವಾಗಿ ಈ ಮಾತ್ರೆಯನ್ನು ಸಾಮಾನ್ಯ ಜ್ವರ ಬಂದರೂ ನೀಡುತ್ತಿದ್ದಾರೆ. ಹೀಗಾಗಿ ಹಂದಿಜ್ವರ ಬಂದ ಮೇಲೆ ಈ ಮಾತ್ರೆಯನ್ನು ಮೊದಲೇ ಸೇವಿಸುತ್ತಿದ್ದವರು ಮತ್ತೊಮ್ಮೆ ಸೇವಿಸಿದರೆ ಟ್ಯಾಮಿಫ್ಲೂ ಮಾತ್ರೆ ಕೆಲಸ ಮಾಡುವುದಿಲ್ಲ. ಹೀಗಾಗಿ ವೈದ್ಯರು ಸೂಚಿಸಿದ ಬಳಿಕವಷ್ಟೇ ಈ ಮಾತ್ರೆಯನ್ನು ಸೇವಿಸಬೇಕಾಗುತ್ತದೆ. ಒಂದರಿಂದ ಮೂರು ದಿನಗಳ ಕಾಲ ಈ ವೈರಾಣು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿರುತ್ತದೆ, ನಂತರ ವೈರಾಣು ಸತ್ತುಹೋಗಿ ಒಂದು ವಾರದಲ್ಲಿ ಮನುಷ್ಯ ಮೊದಲಿನಂತೆ ಆರೋಗ್ಯವಾಗಿರುತ್ತಾನೆ. ಆದರೆ ಚಿಕಿತ್ಸೆ ಪಡೆಯದಿದ್ದರೆ ಮಾತ್ರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.
ನಗರದಲ್ಲೇ ಹೆಚ್ಚು ಏಕೆ?
ನಗರಗಳಲ್ಲಿ ಜನ ಸಂಚಾರ ಹೆಚ್ಚು. ಉದ್ಯೋಗಕ್ಕಾಗಿ ಪ್ರಯಾಣ ಮಾಡುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಹಾನಗರಗಳಲ್ಲಿ ಹಂದಿ ಜ್ವರ ಹೆಚ್ಚಾಗಿ ಕಂಡುಬರುತ್ತಿದೆ.
ರೋಗ ಬಾರದಂತೆ ತಡೆಯಲು ಏನು ಮಾಡಬಹುದು?
– ಹೊರಗೆ ಸಿಕ್ಕಿದಲ್ಲೆಲ್ಲ ಉಗುಳುವ ಅಭ್ಯಾಸವನ್ನು ಬಿಡಬೇಕು
– ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಅಥವಾ ಯಾವುದಾದರೂ ಬಟ್ಟೆಯನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯಬೇಕು.
– ಧರಿಸಿರುವ ಮಾಸ್ಕನ್ನು ಪ್ರತಿದಿನ ಬದಲಿಸಬೇಕು. ಜಾಸ್ತಿ ಜನ ಸಂದಣಿ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಉತ್ತಮ. ಹೋದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
– ಸ್ವಚ್ಛವಾಗಿರುವ ಸೋಪಿನಲ್ಲಿ ಕೈಯನ್ನು ತೊಳೆಯುತ್ತಿರಬೇಕು
– ದೂರದ ಪ್ರಯಾಣವನ್ನು ಕಡಿಮೆ ಮಾಡಿ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಿ.
ಇದೂವರೆಗೆ ಎಷ್ಟು ಜನ ಮೃತಪಟ್ಟಿದ್ದಾರೆ?
ಯುರೋಪಿಯನ್ ಸೆಂಟರ್ ಫಾರ್ ಡಿಸಿಸ್ ಆಂಡ್ ಪ್ರಿವೆಂನ್ಷನ್ ಆಂಡ್ ಕಂಟ್ರೋಲ್ ನೀಡಿದ ವರದಿಯಂತೆ ಈ ರೋಗ ಕಂಡು ಬಂದ ಆರಂಭದ ವರ್ಷವಾದ 2009ರಲ್ಲಿ ವಿಶ್ವದಲ್ಲಿ 14,286 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 33,761 ಮಂದಿಗೆ ಹಂದಿ ಜ್ವರ ಬಾಧಿಸಿದ್ದು, 2035 ಮಂದಿ ಮೃತಪಟ್ಟಿದ್ದಾರೆ ಎಂದು 2015ರ ಮಾರ್ಚ್‍ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.
ಕರ್ನಾಟಕದಲ್ಲಿ ಎಷ್ಟು ಮಂದಿಗೆ ಬಂದಿದೆ?
ಕರ್ನಾಟಕದಲ್ಲಿ 2016ರಲ್ಲಿ 110 ಮಂದಿಗೆ ಕಾಣಿಸಿದ್ದರೂ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿರಲಿಲ್ಲ. 2017ರಲ್ಲಿ 871 ಮಂದಿಗೆ ಕಾಣಿಸಿಕೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾರ್ಚ್‍ನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತಿಳಿಸಿದೆ.