ಎಚ್‍ಡಿಡಿ ಒತ್ತಾಯದ ಮೇರೆಗೆ ರಾಜೀನಾಮೆ ನಿರ್ಧಾರ ವಾಪಸ್: ಎಚ್.ವಿಶ್ವನಾಥ್

Public TV
2 Min Read
h vishwanth

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ ವರಿಷ್ಠರಾದ ಎಚ್‍ಡಿ ದೇವೇಗೌಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಸಂದರ್ಭದಲ್ಲಿ ರಾಜೀನಾಮೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪರಿಣಾಮ ರಾಜೀನಾಮೆ ನಿರ್ಧಾರ ವಾಪಸ್ ಪಡೆದಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್. ವಿಶ್ವನಾಥ್ ತಿಳಿಸಿದ್ದಾರೆ.

ಲೋಕ ಫಲಿತಾಂಶದ ಬಳಿಕ ಮೊದಲ ಬಾರಿಗೆ ಜೆಡಿಎಸ್ ಶಾಸಕಾಂಗ ಸಭೆಯನ್ನ ಇಂದು ನಡೆಸಲಾಯಿತು. ಸತತ ಮೂರು ಗಂಟೆಗಳ ಕಾಲ ನಡೆದ ಸಭೆ ಬಳಿಕ ಎಚ್ ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಚುನಾವಣೆ ಸೋಲಿಗೆ ನಾನು ನೈತಿಕತೆ ಹೊತ್ತು ರಾಜೀನಾಮೆಗೆ ನಿರ್ಧಾರ ಮಾಡಿದ್ದೆ. ದೇವೇಗೌಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷ ಕಟ್ಟುವ ಅವಶ್ಯಕತೆ ಇರುವುದರಿಂದ ರಾಜೀನಾಮೆ ಬೇಡ ಎಂದು ಮನವರಿಕೆ ಮಾಡಿದ್ದಾರೆ. ಸಭೆಯಲ್ಲಿ ಯಾವುದೇ ಅಪಪ್ರಚಾರಕ್ಕೆ ತಲೆಕಡೆಸಿಕೊಳ್ಳದೆ, ಎಲ್ಲರೂ ಒಗ್ಗಟ್ಟಾಗಿ ನಡೆಯುವ ನಿರ್ಧಾರ ಮಾಡಿದ್ದು, ಬಿಜೆಪಿಯ ಆಮಿಷಕ್ಕೆ ಬಲಿಯಾಗಬಾರದು ಹಾಗೂ ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.

HDD 1

ಸಿಎಂ ರಾಜೀನಾಮೆ?
ಇದೇ ವೇಳೆ ಸೋಲಿನ ಹೊಣೆ ಹೊತ್ತು ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುತ್ತರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ರಾಜೀನಾಮೆ ಬಗ್ಗೆ ಇವತ್ತಿನ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಅಂತಹ ಯಾವುದೇ ಚರ್ಚೆಯ ಅವಶ್ಯಕತೆ ಇಲ್ಲ. ಅಲ್ಲದೇ ಪ್ರಜ್ವಲ್ ರೇವಣ್ಣ ರಾಜೀನಾಮೆ ಬಗ್ಗೆಯೂ ನಡೆದಿಲ್ಲ. ಸದ್ಯ ಯಾರು ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಿಲ್ಲ ಎಂದರು.

ಮಾಧ್ಯಮಗಳಿಂದ ಜೆಡಿಎಸ್ ದೂರ?
ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗೆ ಜೆಡಿಎಸ್ ನಾಯಕರು ಬರುವುದಿಲ್ಲ. ಈ ಬಗ್ಗೆ ನಮ್ಮ ನಾಯಕರು ಮಾಹಿತಿ ನೀಡಿದ್ದಾರೆ. ಮಾಧ್ಯಮದಲ್ಲಿ ಚರ್ಚೆಗೆ ಹೋಗುವ ಮುಖಂಡರ ಬಗ್ಗೆ ಪಕ್ಷದ ವಕ್ತಾರರೇ ಪಟ್ಟಿ ಸಿದ್ಧ ಪಡಿಸುತ್ತಾರೆ. ಅಲ್ಲಿವರೆಗೆ ಜೆಡಿಎಸ್ ನಿಂದ ಯಾವ ಮುಖಂಡರು ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಪಟ್ಟಿ ಸಿದ್ಧವಾದ ಬಳಿಕ ಮಾಧ್ಯಮಕ್ಕೆ ನೀಡುತ್ತೇವೆ. ಅಲ್ಲದೇ ಎರಡೂ ಪಕ್ಷದ ಅಧ್ಯಕ್ಷರು ಸಮನ್ವಯ ಸಮಿತಿಯಲ್ಲಿ ಇರಬೇಕು. ಈಗಲೂ ನನ್ನ ಒತ್ತಾಯ ಇದೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

CM HDK

ಬಳಿಕ ಮಾತನಾಡಿದ ಬಸವರಾಜ್ ಹೊರಟ್ಟಿ ಅವರು, ಸೋಲಿನ ಬಗ್ಗೆ ಸದ್ಯ ಏನು ಮಾತನಾಡುವುದಿಲ್ಲ. ಅದೆಲ್ಲ ಮರೆತು ಮುಂದಿನ ಕೆಲಸದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಸೋಲಿನ ಬಗ್ಗೆ ಚರ್ಚೆ ಅನಗತ್ಯ. ಬಿಜೆಪಿ ಪರ ಜೆಡಿಎಸ್ ನವರು ಮತ ಹಾಕಿದ್ದಾರೆ ಎಂಬ ಜೆಡಿಎಸ್ ಸಚಿವರ ಹೇಳಿಕೆ ವಿಚಾರವೂ ಇಂದಿಗೆ ಮುಕ್ತಾಯವಾಗಿದ್ದು, ಈ ಬಗ್ಗೆ ಯಾವುದೇ ಚರ್ಚೆ, ಕ್ರಮ ಇಲ್ಲ ಎಂದರು. ಸಿಎಂ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠರಾದ ದೇವೇಗೌಡರ ನೇತ್ರತ್ವದಲ್ಲಿ ಸಭೆಯಲ್ಲಿ ಜೆಡಿಎಸ್ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಪ್ರಮುಖ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *