ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಹೆಚ್ ವಿಶ್ವನಾಥ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್‍ಗೆ ವಿದಾಯ ಹೇಳಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ.
ಮೂರು ಪುಟಗಳ ಪತ್ರದಲ್ಲಿ ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದ ದಿನಗಳಿಂದ ಕಾಂಗ್ರೆಸ್‍ನಲ್ಲಿದ್ದೇನೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಸಿಎಂ ಸಿದ್ದರಾಮಯ್ಯ ವರ್ತನೆ ಸರಿಯಿಲ್ಲ. ಸಿಎಂ ವರ್ತನೆಯಿಂದ ಅನೇಕ ಹಿರಿಯ ಕಾಂಗ್ರೆಸಿಗರು ಪಕ್ಷ ಬಿಟ್ಟಿದ್ದಾರೆ. ಇನ್ನೂ ಅನೇಕ ಮುಖಂಡರು, ಶಾಸಕರು ಪಕ್ಷ ಬಿಡಲಿದ್ದಾರೆ. ಸಿಎಂ ನನ್ನನ್ನ ಕಡೆಗಣಿಸಿದ್ದಾರೆ, ಅವಮಾನಿಸಿದ್ದಾರೆ. ಇವೆಲ್ಲ ವಿದ್ಯಮಾನಗಳಿಂದ ಮನನೊಂದಿದ್ದೇನೆ. ಈ ಎಲ್ಲ ವಿಚಾರದಿಂದಾಗಿ ನಾನು ಕೂಡಾ ಕಾಂಗ್ರೆಸ್ ತೊರೆಯಬೇಕು ಎಂದಿದ್ದೇನೆ ಎಂದು ವಿಶ್ವನಾಥ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Advertisement
ನಾನು ಎಐಸಿಸಿ ಮತ್ತು ಕೆಪಿಸಿಸಿ ಸದಸ್ಯನಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನವಿಲ್ಲ. ಸಕಾರಣವಿಲ್ಲದೆ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು. ಸಿದ್ದರಾಮಯ್ಯ ಅವರ ದುರಹಂಕಾರದ ಸ್ವಭಾವದಿಂದ ಹಲವು ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಹಾಲಿ ಶಾಸಕರು ಸೇರಿದಂತೆ ಕೆಲವರು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ನನ್ನ ಬಗ್ಗೆ ಮುಖ್ಯಮಂತ್ರಿಗಳು ತೋರಿದ ನಿರ್ಲಕ್ಷ್ಯತನದಿಂದಾಗಿ ನಾನೂ ಕೂಡಾ ಕಾಂಗ್ರೆಸ್ ತೊರೆಯಬಹುದು. ನಾನು ಕಣ್ಣು ಮತ್ತು ಕಿವಿ ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
Advertisement
ಎಂಜಾಯ್ ಮಾಡೋಕೆ ಅಧಿಕಾರ ಹಿಡಿದಿದ್ದಾರೆ: ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ. ಸಚಿವರು ಸಿಎಂ ಜೊತೆ ಹೊಂದಾಣಿಕೆ ಇಲ್ಲ. ಹಿರಿಯ ಕಾಂಗ್ರೆಸ್ ನಾಯಕರ ಸಲಹೆಗಳನ್ನು ಪ್ರಮುಖ ವಿಚಾರಗಳಲ್ಲಿ ತೆಗೆದುಕೊಂಡಿಲ್ಲ. ಕೇವಲ ಎಂಜಾಯ್ ಮಾಡೋಕೆ ಅಧಿಕಾರ ಹಿಡಿದಿದ್ದಾರೆ. ಅನೇಕ ಸಚಿವರ ಮೇಲೆ ಕ್ರಿಮಿನಲ್ ಅಪರಾಧಗಳಿದ್ರು ಸರ್ಕಾರ ಮೌನವಾಗಿ ಕುಳಿತಿದೆ. ಇಂತಹ ಸಚಿವರಿಂದ ಪಕ್ಷದ, ಸರ್ಕಾರದ ಹೆಸರು ಕೆಟ್ಟಿದೆ. 4 ವರ್ಷಗಳಿಂದ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಿದೆ ಎಂದು ಸಿಎಂ ಆಡಳಿತ ವೈಖರಿ ವಿರುದ್ಧ ವಿಶ್ವನಾಥ್ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
Advertisement
ಇದನ್ನೂ ಓದಿ: ಕಾಂಗ್ರೆಸ್‍ನಲ್ಲೂ ಭಿನ್ನಮತ ಸ್ಫೋಟ: ಕಾರ್ಯಕರ್ತರಲ್ಲಿ ವೇಣುಗೋಪಾಲ್ ಕೇಳಿದ ಆ ಐದು ಪ್ರಶ್ನೆಗಳು ಇಲ್ಲಿದೆ
Advertisement
ಸೋಮವಾರದಂದೇ ಕೆಸಿ ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಪತ್ರ ಬರೆದಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ವೇಣುಗೋಪಾಲ್ ಅವರ ಜೊತೆ ವಿಶ್ವನಾಥ್ ಭೇಟಿ ನಿಗದಿಯಾಗಿದೆ. ನಿನ್ನೆ ಪಕ್ಷದ ಪದಾಧಿಕಾರಿಗಳ ಜೊತೆಗೆ ವೇಣುಗೋಪಾಲ್ ಮಾತುಕತೆ ನಡೆಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದು ಶಾಸಕರು, ಸಚಿವರು ಹಾಗೂ ಮಾಜಿ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.