ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಮೈತ್ರಿ ಸರ್ಕಾರದ ಈ ಸ್ಥಿತಿಗೆ ಆ 36 ಪತ್ರಗಳು ಒಂದು ಕಾರಣ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ಒಟ್ಟು 36 ಪತ್ರಗಳನ್ನು ಸಿಎಂಗೆ ಬರೆದಿದ್ದರು. ಇಷ್ಟು ಪತ್ರ ಬರೆದಿದ್ದರೂ ಒಂದು ಪತ್ರವನ್ನು ಸಿಎಂ ಗಂಭೀರವಾಗಿ ಪರಿಗಣಿಸಿಯೇ ಇಲ್ಲವಂತೆ. ಈ ಕಾರಣಕ್ಕೆ ಅಸಮಾಧಾನಗೊಂಡಿದ್ದ ಎಚ್.ವಿಶ್ವನಾಥ್ ಲೋಕಸಭಾ ಚುನಾವಣೆಯ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
Advertisement
Advertisement
ರಾಜೀನಾಮೆ ನೀಡಿದ ಬಳಿಕವೂ ಸಿಎಂ ಪತ್ರಕ್ಕೆ ಸ್ಪಂದಿಸಬಹುದು ಎನ್ನುವ ನಿರೀಕ್ಷೆಯನ್ನು ವಿಶ್ವನಾಥ್ ಇಟ್ಟುಕೊಂಡಿದ್ದರು. ಇಷ್ಟಾದರೂ ಸಿಎಂ ವಿಶ್ವನಾಥ್ ಅವರ ಪತ್ರಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಈ ಅವಮಾನವೇ ‘ಹಳ್ಳಿ ಹಕ್ಕಿ’ಯ ಆಕ್ರೋಶಕ್ಕೆ ಕಾರಣವಾಗಿ, ಈ ಸಿಟ್ಟು ಸ್ಫೋಟಗೊಂಡು ಈಗ ಸರ್ಕಾರವನ್ನು ಕುಕ್ಕಿ ಬೀಳಿಸುವ ಹಂತಕ್ಕೆ ತಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಎಚ್.ವಿಶ್ವನಾಥ್ ಅವರು ಕ್ಷೇತ್ರದ ಸಮಸ್ಯೆ, ಕೆಲ ವರ್ಗಾವಣೆ ಪತ್ರಗಳನ್ನು ಕೊಟ್ಟಿದ್ದರು. ಸಿಎಂ ಆಗಲಿ, ಅವರ ಆಪ್ತ ಸಹಾಯಕರಾಗಲಿ, ಅಧಿಕಾರಿಗಳಾಗಲಿ ಈ ಪತ್ರಗಳಿಗೆ ಕ್ಯಾರೇ ಅಂದಿರಲಿಲ್ಲ. ಇದರಿಂದ ಬೇಸರಗೊಂಡ ಹಿರಿಯ ನಾಯಕ ಎಚ್.ವಿಶ್ವನಾಥ್, ಸಿಎಂ ವಿರುದ್ಧ ಬಂಡೇಳಲು ವೇದಿಕೆ ನಿರ್ಮಿಸಿ ಈಗ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.
ಜೆಡಿಎಸ್‍ನ ಮೂವರು ಶಾಸಕರಿಗೆ ಧೈರ್ಯತುಂಬಿ ಪಕ್ಷ ಬಿಡುವಂತೆ ಸೂಚಿಸಿದ್ದಾರೆ. ಟೀಂನಲ್ಲಿದ್ದ ಮೂವರ ಪೈಕಿ ಸದಸ್ಯ ಇಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಓರ್ವ ಶಾಸಕ ಮಾತ್ರ ರಾಜೀನಾಮೆ ಲಿಸ್ಟ್‍ನಿಂದ ಹೊರಗೆ ಇದ್ದಾರೆ.
ಅತೃಪ್ತ ಶಾಸಕರ ನೇತೃತ್ವವನ್ನು ವಿಶ್ವನಾಥ್ ವಹಿಸಿಕೊಂಡಿದ್ದು ಶನಿವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ನಮ್ಮ ರಾಜೀನಾಮೆಗೆ ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಹೇಳಿದ್ದರು.
ಕ್ಷಿಪ್ರ ಬೆಳವಣಿಗೆಗೆ ಸರ್ಕಾರ ನಡೆಸುವವರೇ ಕಾರಣ. ಸಮ್ಮಿಶ್ರ ಸರ್ಕಾರ ಜನರ ಆಶೋತ್ತರಗಳನ್ನು ಅರ್ಥೈಸಿಕೊಂಡು ಎರಡು ಪಕ್ಷದ ಶಾಸಕರನ್ನು ಒಂದಾಗಿ ಕರೆದುಕೊಂಡು ಹೋಗಲು ವಿಫಲವಾಗಿದೆ. ಸರ್ಕಾರ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಎಲ್ಲರ ಸಲಹೆ ತೆಗೆದುಕೊಂಡು ಹೋಗಲು ವಿಫಲವಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಸತ್ತು ಹೋಗಿದೆ. ಇದೂ ಸರ್ಕಾರ ನಡೆಗೆ ಬಹುಮುಖ್ಯ ಉದಾಹರಣೆಯಾಗಿದೆ. ಇಂತಹ ಹಲವು ಕಾರ್ಯಗಳು ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ. ಸರ್ಕಾರ ನಡೆಸುವವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪ ಮಾಡದೇ ಟೀಕಿಸಿದ್ದರು.