– ಸಂಸದರ ವಿರುದ್ಧ ಕ್ರಮಕೈಗೊಳ್ಳುತ್ತೇನೆ
– ಮೋದಿ ಜಿಯೋ ಅಂಬಾಸಿಡರ್
– ಕುಟುಂಬ ರಾಜಕಾರಣ ಜಗತ್ತಿನ ವಿಶೇಷ
– ಯುದ್ಧದ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ
– ಬೋಫೋರ್ಸ್ ಹಗರಣದಿಂದ ಕಾಂಗ್ರೆಸ್ ಬಿತ್ತು, ರಫೇಲ್‍ನಿಂದ ಬಿಜೆಪಿ ಬೀಳುತ್ತೆ
ಬೆಂಗಳೂರು: ಸಂಸದ ಶಿವರಾಮೇಗೌಡ ಅವರು ಮಂಡ್ಯದಲ್ಲಿ ಜಾತಿ ಬಗ್ಗೆ ಪ್ರಸ್ತಾಪ ಮಾಡಬಾರದಿತ್ತು. ಈ ಮೂಲಕ ಸಂಸದರು ತಮ್ಮ ಹೇಳಿಕೆ ಮೂಲಕ ಮಂಡ್ಯದ ಗೌರವ ಹಾಳು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ. ಆದರೂ ಅವರು ಯಾವತ್ತೂ ಜಾತಿವಾದ ಮಾಡಿಲ್ಲ. ಸಂಸದರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಸುಮಲತಾ ಅಂಬರೀಶ್ ಮಂಡ್ಯದ ಸೊಸೆ. ಅಂಬರೀಶ್ ಹೆಂಡತಿ. ಅವರ ಬಗ್ಗೆ ಯಾರು ಜಾತಿ ವಿಚಾರದಲ್ಲಿ ಮಾತನಾಡಬಾರದು ಎಂದು ತಿಳಿಸಿದರು.
Advertisement
Advertisement
ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾದ ಬಳಿಕ ಸಂಭ್ರಮಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಆರೋಗ್ಯ ಸರಿಯಿಲ್ಲದ ಕಾರಣ ನನಗೆ ಬಿಡುಗಡೆ ಕೊಡಿ ಅಂತ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಕೇಳಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ನೀವೇ ಮುಂದುವರಿಯಬೇಕು ಎಂದು ಹೇಳಿದರು. ಹೀಗಾಗಿ ನಾನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವೆ ಎಂದರು.
Advertisement
ದೇಶದಲ್ಲಿ ಲೋಕಸಭಾ ಚುನಾವಣೆ ಜೋರಾಗಿ ನಡೆಯುತ್ತಿದೆ. ಜನತಂತ್ರ ವ್ಯವಸ್ಥೆಯ ಜಾತ್ರೆ ದೇಶದಲ್ಲಿ ನಡೆಯುತ್ತಿದೆ. ಈ ಚುನಾವಣೆ ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ಬಹುತ್ವದ ಬಗೆಗಿನ ನಡುವಿನ ಸಂಘರ್ಷವಾಗಿದೆ. ನಕಲಿ ರಾಷ್ಟ್ರವಾದಿ ಬಿಜೆಪಿಯನ್ನು ಹೊಗಳಿದವರು ದೇಶಪ್ರೇಮಿಗಳು. ಇಲ್ಲ ಅಂದ್ರೆ ಅವರು ದೇಶ ವಿರೋಧಿಗಳು. ಇಂತಹ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಪ್ರಧಾನಿ ಮೋದಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಅವರು ದೇಶಕ್ಕೆ ಕೊಟ್ಟ ವಚನ ಏನಾಯಿತು? ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಹೀಗೆ ಪ್ರಶ್ನೆ ಮಾಡಿದರೆ ಅವರು ದೇಶ ವಿರೋಧಿಗಳಾಗುತ್ತಾರೆ. ಹೀಗಾಗಿ ಬಿಜೆಪಿ ನಕಲಿ ರಾಷ್ಟ್ರವಾದಿ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಈ ಮೂಲಕ ಅವರು 5 ವರ್ಷಗಳಲ್ಲಿ 10 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈವರೆಗೆ ಕೇವಲ 27 ಲಕ್ಷ ಜನರಿಗೆ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಬಿಎಸ್‍ಎನ್‍ಎಲ್ ಸಂಸ್ಥೆ ಇವತ್ತು ಅವನತಿ ಹೊಂದುತ್ತಿದೆ. ಈ ಮೂಲಕ ಅಲ್ಲಿನ 50 ಸಾವಿರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಖಾಸಗಿ ಕಂಪನಿ ಜಿಯೋಗೆ ಅಂಬಾಸಿಡರ್ ಆಗಿದ್ದಾರೆ ಎಂದು ದೂರಿದರು.
ಕುಟುಂಬ ರಾಜಕಾರಣ ಜಗತ್ತಿನ ವಿಶೇಷವಾಗಿದೆ. ಈಗಿನ ಲೋಕಸಭೆಯ ಸಂಸದರಲ್ಲಿ ಸುಮಾರು 150 ಜನ ಕುಟುಂಬ ರಾಜಕಾರಣದಿಂದಲೇ ಬಂದಿದ್ದಾರೆ. ಬಿಹಾರದ ಆರ್‍ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹಾಗೂ ಉತ್ತರ ಪ್ರದೇಶದಲ್ಲಿ ಎಸ್‍ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ 5ರಿಂದ 6 ಜನರು ಸ್ಪರ್ಧಿಸುತ್ತಿದ್ದಾರೆ. ಒಂದೇ ಕುಟುಂಬದಿಂದ ಮೂರು ಜನ ಸ್ಪರ್ಧಿಸುವುದು ತಪ್ಪೇ? ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಅಭ್ಯರ್ಥಿ ಅಂತಾನೆ ಮಂಡ್ಯ ಲೋಕಸಭಾ ಕಣಕ್ಕೆ ಇಳಿಸಿದ್ದೇವೆ ಎಂದು ಹೇಳಿದರು.
ಜನ್ ಧನ್ ಅಕೌಂಟ್ ಇವತ್ತು ಜಿರೋ ಬ್ಯಾಲೆನ್ಸ್ ಆಗಿಯೇ ಇದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಯೋಜನಾ ಆಯೋಗ ಜಾರಿಗೆ ತಂದಿದ್ದರು. ಅದರೆ ಅದನ್ನು ಪ್ರಧಾನಿ ಮೋದಿ ತೆಗೆದು ಹಾಕಿ, ನೀತಿ ಆಯೋಗ ತಂದರು. ಆದರೆ ಇಂದು ನೀತಿ ಆಯೋಗ ಏನಾಗಿದೆ? ಅದನ್ನು ಕೂಡ ಮೋದಿ ಹಾಳು ಮಾಡಿದ್ದಾರೆ ಎಂದು ದೂರಿದರು.
ಯುದ್ಧ ಭಾರತಕ್ಕೆ ಹೊಸದೇನಲ್ಲ. ಅನೇಕ ಯುದ್ಧಗಳನ್ನು ಭಾರತ ನೋಡಿದೆ. ಆದರೆ ಬಿಜೆಪಿಯವರು ಯುದ್ಧವನ್ನೇ ದೊಡ್ಡ ವಿಚಾರವಾಗಿ ಮಾಡಿಕೊಂಡರು. ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರೇ ನೇರವಾಗಿ ಪಾಕಿಸ್ತಾನಕ್ಕೆ ಹೋಗಿ ಉಗ್ರರನ್ನು ಹೊಡೆದು ಬಂದಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದರು. ಇದು ಯಾಕೆ ನಿಮಗೆ ನೆನಪು ಬರುತ್ತಿಲ್ಲ. ಯುದ್ಧದ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ ಕಿಡಿಕಾರಿದರು.
ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಅಂದಿದ್ದರು. ಆದರೆ ರಫೇಲ್ ಡೀಲ್‍ನಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ. ರಫೇಲ್ ಡೀಲ್‍ನ ಕಡತಗಳೇ ನಾಪತ್ತೆಯಾಗಿವೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಬೇಕಾ ಎಂದು ಪ್ರಶ್ನಿಸಿದರು.
2014ರಲ್ಲಿ ನರೇಂದ್ರ ಮೋದಿ ಬಗ್ಗೆ ಜನ ಅಭಿಮಾನ, ನಂಬಿಕೆ ಇಟ್ಟುಕೊಂಡು ಬಹುಮತ ಕೊಟ್ಟಿದ್ದರು. ಬೋಫೋರ್ಸ್ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದ ಇತಿಹಾಸವಿದೆ. ಹಾಗೆ ರಫೇಲ್ ಡೀಲ್‍ನ ಹಗರಣದಿಂದ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ರೈತರ ಪರ ಕೆಲಸ ಮಾಡುತ್ತಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ಮರೆತಿದೆ. ರೈತರ ಖಾತೆಗೆ ಎರಡು ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ. ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಎಷ್ಟೇ ಕಷ್ಟ ಇದ್ದರು ಸಾಲಮನ್ನಾ ಜಾರಿಗೆ ತಂದಿದ್ದಾರೆ ಎಂದರು.
ನಮ್ಮದು ಪ್ರಾದೇಶಿಕ ಪಕ್ಷ. ದೇಶಕ್ಕೆ ಪ್ರಧಾನಿಯನ್ನ ಕೊಟ್ಟಿದ್ದೇವೆ. ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿ ನಾವು ಆದ್ಯತೆ ನೀಡುತ್ತೇವೆ ಎಂದು ವಿಶ್ವನಾಥ್ ಹೇಳಿದರು.