ಬೆಂಗಳೂರು: ಇಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಜೊತೆ ಈ ಹಿಂದೆ ಮುಂಬೈನಲ್ಲಿ ಒಟ್ಟಿಗೆ ಕೈ ಎತ್ತಿ ಹೆಚ್. ವಿಶ್ವನಾಥ್ ಸಮ್ಮಿಶ್ರ ಸರ್ಕಾರ ಕೆಡವಿದ್ದರು. ಆದರೆ ಇಂದು ಏಕಾಂಗಿಯಾಗಿ ರಾಜಭವನದಲ್ಲಿ ಓಡಾಡಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಶಾಸಕರ ಪಾತ್ರ ಪ್ರಮುಖವಾಗಿದೆ. ಹೀಗೆ ಬಿಜೆಪಿ ಸೇರಿದ 10 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಂದು ಕಡೆ ಅಧಿಕಾರ ಸಿಕ್ಕ ಖುಷಿಯಲ್ಲಿ ನೂತನ ಸಚಿವರಿದ್ದರೆ, ಇನ್ನೊಂದೆಡೆ ಹಳ್ಳಹಕ್ಕಿ ವಿಶ್ವನಾಥ್ ಅವರು ಏಕಾಂಗಿಯಾಗಿ ರಾಜಭವನದಲ್ಲಿ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
Advertisement
Advertisement
ಏಕಾಂಗಿಯಾಗಿ ರಾಜಭವನದಲ್ಲಿ ವಿಶ್ವನಾಥ್ ಓಡಾಡುತ್ತಿದ್ದ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಬೆಂಬಲಿಗರು, ಕಾರ್ಯಕರ್ತರು ಯಾರೂ ಇಲ್ಲದೇ ಏಕಾಂಗಿಯಾಗಿ ವಿಶ್ವನಾಥ್ ಅವರು ರಾಜಭವನದಲ್ಲಿ ಓಡಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಧಿಕಾರ ಸಿಕ್ಕ ಮೇಲೆ ವಿಶ್ವನಾಥ್ ಜೊತೆಗಿದ್ದ ಶಾಸಕರು ಅವರನ್ನು ಒಂಟಿಯಾಗಿ ಬಿಟ್ಟು ಹೋದರಾ ಎಂಬ ಮಾತುಗಳು ಕೂಡ ಕೇಳಿಬಂದಿದೆ.
Advertisement
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಸೇರಿದಂತೆ ಗೆದ್ದವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ನಾನೇನು ಅವಸರ ಮಾಡಲಾರೆ. ಇದೊಂದು ತರ ಸಿಎಂ ಅವರಿಗೂ ಸಂಕಟದ ಕಾಲ. ಒಂದಲ್ಲ ಒಂದು ದಿನ ಸಚಿವ ಸ್ಥಾನ ಸಿಗುತ್ತದೆ. ಸಿಎಂ ವಚನ ಭ್ರಷ್ಟರಾಗಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
Advertisement
ಎಂಟಿಬಿ ನಾಗರಾಜ್, ವಿಶ್ವನಾಥ್ ಹಾಗೂ ಶಂಕರ್ ಅವರನ್ನು ಕರೆದು ಸಿಎಂ ಯಡಿಯೂರಪ್ಪ ಅವರು ಮಾತುಕತೆ ನಡೆಸಿದ್ದಾರೆ. ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ, ತಾಳ್ಮೆಗೆಟ್ಟು ಹೇಳಿಕೆಗಳನ್ನು ಕೊಡಬಾರದು ಎಂದು ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಜೂನ್ ಬಳಿಕ ನಿಮಗೆ ಸೂಕ್ತ ಸ್ಥಾನ ಮಾನ ನೀಡುತ್ತೇವೆ ಎಂದು ಸಿಎಂ ಭರವಸೆ ನೀಡಿರುವ ಹಿನ್ನೆಲೆ ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಅವರು ಸುಮ್ಮನ್ನಿದ್ದಾರೆ ಎಂಬ ಚರ್ಚೆಗಳು ಕೂಡ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.