ಕಲಬುರಗಿ: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಬಹುತೇಕವಾಗಿ ಸತ್ಯ ಹೇಳುತ್ತಾರೆ. ಸಿದ್ದರಾಮಯ್ಯ ಅವರ ಕುರಿತು ಸತ್ಯವಾದ ಮತು ಹೇಳಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ದಳ ನಾಯಕನ ಪರ ನಿಂತಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಳಿಕ ವಿಶ್ವನಾಥ್ ಅವರು ಬಹುತೇಕವಾಗಿ ಸತ್ಯ ಹೇಳುತ್ತಾರೆ. ಸಿದ್ದರಾಮಯ್ಯ ಅವರ ಕುರಿತು ಸತ್ಯ ಹೇಳಿದ್ದಾರೆ. ಅಲ್ಲದೆ ಹಿಂದುಳಿದ ವರ್ಗದ ಚಾಂಪಿಯನ್ ಅಂತ ಸಿದ್ದರಾಮಯ್ಯ ಸಿಎಂ ಆದರು, ನಂತರ ಜಾತಿ ಜಾತಿಯಲ್ಲಿ ಜಗಳ ಹಚ್ಚಿದ್ರು. ನಿಮ್ಮ ಮೊಸಳೆ ಕಣ್ಣೀರಿನಿಂದ ಕೆಲಸ ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ನಾಯಕ ವಿಶ್ವನಾಥ್ ಸಮ್ಮಿಶ್ರ ಸರ್ಕಾರದ ಒಳಬೇಗುದಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ವಿಶ್ವನಾಥ್ ಹೇಳಿಕೆ ಸಾಕ್ಷಿಯಾಗಿದೆ. ಎಲ್ಲಿ ಕೂಡ ಹೊಂದಾಣಿಕೆ ಪ್ರಚಾರ ನಡೆಯಲಿಲ್ಲ. ಜೆಡಿಎಸ್‍ನವರು ಏಳು ಕ್ಷೇತ್ರದಲ್ಲಿ ಮಾತ್ರ ಪ್ರಚಾರಕ್ಕೆ ಸಿಮಿತವಾದವರು. ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಹೋದ ಮೈತ್ರಿ ನಾಯಕರಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಯಾವುದೇ ಬಿಜೆಪಿ ನಾಯಕರು ಕರೆ ಕೊಟ್ಟಿಲ್ಲ. ಸಮಿಶ್ರ ಸರ್ಕಾರದ ಒಳ ಬೇಗುದಿಯಿಂದ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರದ ಒಳಜಗಳಕ್ಕೆ ರಾಜ್ಯದ ಜನರು ಕಷ್ಟ ಪಡುತ್ತಿದ್ದಾರೆ. ಸರ್ಕಾರಕ್ಕೆ ಸ್ಪರ್ಶ ಜ್ಞಾನ ಇಲ್ಲ ಕಣ್ಣು ಕಾಣಲ್ಲ, ಕಿವಿ ಕೇಳಿಸೊದಿಲ್ಲ. ಸರ್ಕಾರ ಗಾಢ ನಿದ್ರೆಗೆ ಜಾರಿದ್ದು, ಕುಮಾರಸ್ವಾಮಿ ರೆಸಾರ್ಟ್ ಸೇರಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡಿಲ್ಲ. ಅಧಿಕಾರಿಗಳಿಗೆ ಕುಡಿಯುವ ನೀರಿನ ಹಣ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲೋಕ್ಕೆ ಮುಂದಾಗಿದ್ದಾರೆ. ಸರ್ಕಾರದ ವಿರುದ್ಧದ ಭಾವನೆ ಜನರ ಮನಸ್ಸಲ್ಲಿ ನಿರ್ಮಾಣವಾಗಿದೆ. ರೆಸಾರ್ಟ್ ನಲ್ಲಿ ಮಲಗಿದ ಮುಖ್ಯಮಂತ್ರಿ ರಾಜ್ಯದ ಸಿಎಂ ಆಗಿ ಮುಂದುವರೆಯಬಾರದು. ಹಾಗೆಯೇ ಕುಂದುಗೊಳ ಮತ್ತು ಚಿಂಚೋಳಿಯಲ್ಲಿ ಡಿ.ಕೆ ಶಿವಕುಮಾರ್ ಎಷ್ಟೇ ದುಡ್ಡು ಹಂಚಿದರು ಯಾರನ್ನು ಕೂಡ ಕೊಂಡುಕೊಳ್ಳೊಕೆ ಆಗಲ್ಲ ಎಂದು ಹರಿಹಾಯ್ದರು.
ಖರ್ಗೆ ಅವಮಾನಕರ ರೀತಿಯಲ್ಲಿ ಪ್ರಧಾನಿ ಬಗ್ಗೆ ಮಾತನಾಡಿದ್ದಾರೆ ಇದು ಸರಿಯಲ್ಲ. ನಮಗೆ ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗುತ್ತಾರೆ. ನೇಣಿನ ಬಗ್ಗೆ ಮಾತನಾಡುವ ಖರ್ಗೆ ಕ್ಷಮೆ ಕೇಳಬೇಕು. ಕೂಡಲೇ ಅವರ ಮೇಲೆ ಕೇಸ್ ದಾಖಲಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.