-ಸುಧಾಕರ್ ಡಾಕ್ಟರ್, ಲಾಯರ್ ಅಲ್ಲ
-ಕೊಟ್ಟ ಮಾತು ತಪ್ಪಿದ್ರೆ ಸಿಎಂ ಉತ್ತರ ಕೊಡ್ಬೇಕು
-ನಮ್ಮದು ಹೋರಾಟ ಮಾರಾಟವಲ್ಲ
ಮೈಸೂರು: ಸಂಪುಟ ಬಿಕ್ಕಟ್ಟಿನ ಕುರಿತು ಮಾಜಿ ಸಚಿವ ಹೆಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಸೋತವರಿಗೆ ಸಚಿವ ಸ್ಥಾನ ಇಲ್ಲ ಸಿಎಂ, ಶಾಸಕರಾದ ಸುಧಾಕರ್ ಮತ್ತು ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ನಾವು 17 ಜನರು ಯಾವುದೇ ಗೊಂದಲವನ್ನ ಸೃಷ್ಟಿ ಮಾಡಿಲ್ಲ. ಸಿಎಂ ಗೊಂದಲದಲ್ಲಿದ್ದಾರೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಿಎಂ ಯಡಿಯೂರಪ್ಪ ಸಹ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಈ 17 ಜನರಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ನಮ್ಮ ಈ ಹೋರಾಟಕ್ಕೆ ಗೌರವ ನೀಡಬೇಕು. ನಮ್ಮದು ಹೋರಾಟವೇ ಹೊರತು ಮಾರಾಟ ಅಲ್ಲ ಎಂದು ಗುಡುಗಿದರು.
Advertisement
Advertisement
ಸುಧಾಕರ್ ಡಾಕ್ಟರ್, ನಾನು ಲಾಯರ್. ಸುಪ್ರೀಂಕೋರ್ಟ್ ತೀರ್ಪನ್ನು ನಾನು ಓದಿಕೊಂಡಿದ್ದೇನೆ. ನೀವು ಚುನಾವಣೆಗೆ ನಿಂತು ಪವಿತ್ರರಾಗಿ ಬನ್ನಿ ಎಂದು ಹೇಳಿದೆಯೇ ಹೊರತು ಸೋಲು-ಗೆಲುವಿನ ಬಗ್ಗೆ ಹೇಳಿಲ್ಲ. ಸುಧಾಕರ್ ಡಾಕ್ಟರ್ ಆಗಿದ್ದು, ವಕೀಲರ ಬಳಿ ಜಡ್ಜಮೆಂಟ್ ತರಿಸಿಕೊಂಡು ಓದಿ, ಅರ್ಥಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ನಾನು ಎಲ್ಲ 17 ಜನರೊಂದಿಗೆ ಸಂಪರ್ಕದಲ್ಲಿದ್ದು, ಕೆಲವರು ಎಲ್ಲೋ ಹೋಗಿ ಪಾಠ ಹೇಳಿಸಿಕೊಂಡು ಬಂದು ಮಾತನಾಡುತ್ತಿದ್ದಾರೆ. ಮಂತ್ರಿ, ಸಂಪುಟದ ಬಗ್ಗೆ ಮಾತನಾಡೋದನ್ನು ಬಿಟ್ಟಿದ್ದೇನೆ. ಬಿಜೆಪಿ ಮತ್ತು ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. ಇದೇ 17 ಜನರು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆಗೆದಿದ್ದೇವೆ. ಹಾಗಾಗಿ ನಮ್ಮ ಹೋರಾಟಕ್ಕೆ ಒಂದು ಗೌರವ ಕೊಡಬೇಕಿದೆ. ಕೆಲ ಜನ ನಮ್ಮ ರಾಜಕೀಯದ ಹೋರಾಟವನ್ನು ಮಾರಾಟ ಎಂದು ತಿಳಿದುಕೊಂಡಿದ್ದಾರೆ. ನಮ್ಮ ಈ ರಾಜಕೀಯದ ಹೋರಾಟಕ್ಕೆ ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪನವರು ಗೌರವ ಕೊಡಬೇಕು ಎಂದು ಆಗ್ರಹಿಸಿದರು.
15ರಲ್ಲಿ 12 ಜನರು ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಂತ್ರಿಗಿರಿ ಕೊಡುವಾಗ ಸೋತರು ಎಂಬ ಕಾರಣ ನೀಡಬಾರದು. ಹಾಗಾದ್ರೆ ಲಕ್ಷ್ಮಣ ಸವದಿ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈಗ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಗಳು. ನಾವೇನು ಡಿಸಿಎಂ ಸ್ಥಾನ ಕೇಳಿಲ್ಲ. ಮಂತ್ರಿಗಿರಿ ಕೊಡಲು ಸೋತರು ಎಂಬ ಕಾರಣಗಳನ್ನು ನೀಡುವುದು ತಪ್ಪು. ಒಂದು ವೇಳೆ ನನಗೆ ಸಚಿವ ಸ್ಥಾನ ಸಿಗದಿದ್ದರೆ ಆಕಾಶ ಬೀಳಲ್ಲ. ಸಚಿವ ಸ್ಥಾನ ಯಾಕೆ ತಪ್ಪಿತು ಎಂಬುವುದಕ್ಕೆ ಯಡಿಯೂರಪ್ಪನವರೇ ಉತ್ತರ ನೀಡಬೇಕು. ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಅಂದ್ರೆ ಅದು ಯಡಿಯೂರಪ್ಪ. ಹಾಗಾಗಿ ಸಿಎಂ ಮೇಲೆ ಈ ಕ್ಷಣಕ್ಕೂ ನಂಬಿಕೆ ಎಂದರು.