ಕೆ.ಪಿ.ನಾಗರಾಜ್
ಮೈಸೂರು: ಪತ್ರಕರ್ತ ಕಂ ಸಂಸದ ಆಗಿರೋ ಪ್ರತಾಪ್ ಸಿಂಹಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಕೀಲ ಕಂ ರಾಜಕಾರಣಿ ಆಗಿರೋ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗುತ್ತಾರಾ..?. ಇಂಥದ್ದೊಂದು ಪ್ರಶ್ನೆ ಈಗ ಮೈಸೂರು – ಕೊಡಗು ಭಾಗದಲ್ಲಿ ಹುಟ್ಟಿಕೊಂಡಿದೆ. ಯಾವಾಗ ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಮನೆ ಸೇರಿದ್ರೋ ಅಲ್ಲಿಗೆ ಕಾಂಗ್ರೆಸ್‍ನಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯೋರು ಯಾರು ಎಂಬ ಚರ್ಚೆ ಶುರುವಾಗಿದೆ. ಆರಂಭಿಕ ಚರ್ಚೆಯಲ್ಲಿ ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿರುವ ಮೊದಲ ಹೆಸರೇ ಬ್ರಿಜೇಶ್ ಕಾಳಪ್ಪ..!
ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಸುಪ್ರೀಂಕೋರ್ಟ್‍ನಲ್ಲಿ ವಕೀಲರು. ಕಾಂಗ್ರೆಸ್ ಜೊತೆ ಬಹು ವರ್ಷದ ಸಾಂಗತ್ಯ ಬೆಳೆಸಿಕೊಂಡಿರೋ ಬ್ರಿಜೇಶ್, ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಕೂಡ. ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯದ ನದಿ ನೀರಿನ ವಿವಾದ ಕೇಸ್ ಗಳ ವಕೀಲರ ಟೀಂನಲ್ಲಿ ಸಕ್ರಿಯರಾಗಿದ್ದು ಕೊಂಡೇ ಎಐಸಿಸಿಯ ಮಾಧ್ಯಮ ವಕ್ತಾರರಾಗಿದ್ದಾರೆ. ಕಾಂಗ್ರೆಸ್ ಎಷ್ಟೇ ಇರುಸು ಮುರಿಸಿನ ಸ್ಥಿತಿಯಲ್ಲಿದ್ದರೂ ಪಕ್ಷವನ್ನು ಮಾಧ್ಯಮಗಳಲ್ಲಿ ಸಮರ್ಥಿಸುತ್ತಾ ಹೈಕಮಾಂಡ್ ಕಣ್ಣಿಗೂ ಹತ್ತಿರವಾಗಿದ್ದಾರೆ.
Advertisement
Advertisement
ಯಾವಾಗ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್, ಪ್ರತಾಪ್ ಸಿಂಹ ಎದುರು ಸೋತರೋ ಅವತ್ತಿನಿಂದಲೇ ಬ್ರಿಜೇಶ್ ಕಾಳಪ್ಪ, ತಮ್ಮ ಒಂದು ಕಣ್ಣನ್ನು ಮೈಸೂರು ಲೋಕಸಭಾ ಕ್ಷೇತ್ರದ ಮೇಲೆ ಇಟ್ಟಿದ್ದರು. ಬ್ಯಾಕ್ ಟು ಬ್ಯಾಕ್ ಮೈಸೂರಿಗೆ ಬರುತ್ತಾ ಇಲ್ಲಿನ ಕಾರ್ಯಕರ್ತರ ಜೊತೆ ಸ್ನೇಹ ಬೆಳೆಸಿಕೊಂಡು ಮಾಧ್ಯಮದಲ್ಲೂ ಕಾಣಿಸಿಕೊಳ್ಳೋಕೆ ಶುರು ಮಾಡಿದ್ದರು. ಈಗ, ವಿಶ್ವನಾಥ್ ಅವರೇ ಪಕ್ಷದಿಂದ ಹೊರ ಹೋಗಿರೋ ಕಾರಣ ಬ್ರಿಜೇಶ್ ಕಾಳಪ್ಪ ಹಾದಿ ಸುಲಭವಾದಂತೆ ಕಾಣುತ್ತಿದೆ.
Advertisement
60 ವರ್ಷಗಳ ಹಿಂದೆ ಕೊಡಗು ಮೂಲದ ಸಿ.ಎಂ. ಪೊನ್ನಚ್ಚ ಅವರಿಗೆ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಆನಂತರ, ಕೊಡಗು ಮೂಲದವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ. 2009ರ ಚುನಾವಣೆಯಲ್ಲೇ ಬ್ರಿಜೇಶ್ ಕಾಳಪ್ಪ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಎಚ್. ವಿಶ್ವನಾಥ್ ಅವರು 2009ರ ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ, ಒಂದು ಹಂತದಲ್ಲಿ ಬ್ರಿಜೇಶ್ ಕ್ಷೇತ್ರದ ಆಸೆಯೇ ಬಿಟ್ಟು ರಾಜ್ಯಸಭಾ ಸ್ಥಾನದ ಕಡೆ ಕಣ್ಣಿಟ್ಟು ಕುಳಿತಿದ್ದರು. ಈಗ, ಯಾರು ಅವರ ಟಿಕೆಟ್‍ಗೆ ಬಲವಾದ ಅಡ್ಡಿಯಾಗಿದ್ದರೋ ಅವರೇ ಪಕ್ಷ ತೊರೆದಿರೋ ಕಾರಣ ಮತ್ತೆ ಅಖಾಡ ಪ್ರವೇಶಕ್ಕೆ ಮುಂದಾಗಿದ್ದಾರೆ.
Advertisement
ಹೈಕಮಾಂಡ್ ಗೂ ಹತ್ತಿರ ಹತ್ತಿರ: ಕಾಂಗ್ರೆಸ್ ಹೈಕಮಾಂಡ್ ಜೊತೆ ಅದರಲ್ಲೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಹಲವು ಕಾಂಗ್ರೆಸ್‍ನ ಘಟಾನುಘಟಿ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಬ್ರಿಜೇಶ್ ಕಾಳಪ್ಪ, ಲೋಕಸಭಾ ಕ್ಷೇತ್ರದ ಟಿಕೆಟ್ ಸುಲಭವಾಗಿಯೇ ಗಿಟ್ಟಿಸುತ್ತಾರೆ ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲಿದೆ. ಅಲ್ಲದೆ, ಲೋಕಸಭಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರು ಕೂಡಾ ಇದುವರೆಗೂ ಕ್ಷೇತ್ರದಲ್ಲಿ ಓಡಾಡದೆ ಇರೋದು ಕೂಡ ಬ್ರಿಜೇಶ್ ಕಾಳಪ್ಪಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ.
ಈ ಎಲ್ಲಾ ಲೆಕ್ಕಚಾರ ಸರಿಯಾದರೆ ಪ್ರತಾಪ್ ಸಿಂಹಗೆ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗೋದು ನಿಶ್ಚಿತ. ಟಿವಿ ಡಿಬೇಟ್ ಗಳಲ್ಲಿ ಪರಸ್ಪರ ಮುಖಾಮುಖಿಯಾಗಿ ನಾನೋ ನೀನೋ ಎಂಬಂತೆ ವಾದಿಸುವ ಈ ಇಬ್ಬರು ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರೆ ಅದರ ಖದರ್ ಇನ್ನೂ ಹೆಚ್ಚಾಗುತ್ತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದ್ದು ಕೊಡಗು. ಅದೇ ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಅಖಾಡ ಪ್ರವೇಶ ಮಾಡಿದರೆ ಅಲ್ಲಿನ ಮತದಾರನ ಪ್ರೀತಿ ಯಾರ ಮೇಲೆ ಇರುತ್ತೆ ಅನ್ನೋ ಕೂತುಹಲ ಕೂಡಾ ಇರುತ್ತೆ.
ಇದರ ಜೊತೆಗೆ ಜೆಡಿಎಸ್ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದು ಕೂಡ ಮುಖ್ಯ. ಎಚ್. ವಿಶ್ವನಾಥ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿರೋ ಜೆಡಿಎಸ್ ಸದ್ಯಕ್ಕೆ ವಿಧಾನಸಭಾ ಚುನಾವಣೆಗೆ ಮಾತ್ರ ರಣತಂತ್ರ ಸಿದ್ಧ ಮಾಡುತ್ತಿದೆ. ಹೀಗಾಗಿ, ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಗ್ಗೆ ಇಲ್ಲಿ ಇನ್ನೂ ಎಳೆಯಷ್ಟು ಚರ್ಚೆ ಕೂಡಾ ಶುರುವಾಗಿಲ್ಲ. ಎಚ್. ವಿಶ್ವನಾಥ್ ಪಕ್ಷ ಬಿಟ್ಟ ಕಾರಣ ಕಾಂಗ್ರೆಸ್ ನಲ್ಲಿ ಖಾಲಿಯಾದ ಲೋಕಸಭಾ ಚುನಾವಣಾ ಅಭ್ಯರ್ಥಿ ಸೀಟಿಗೆ ಚರ್ಚೆ ಶುರುವಾಗಿ ಚುನಾವಣೆಗೆ ಇನ್ನೂ ಎರಡು ವರ್ಷ ಮುಂಚೆಯೇ ಲೆಕ್ಕಚಾರಗಳು ಆರಂಭವಾಗಿಬಿಟ್ಟಿವೆ. ಇವತ್ತು ಇರೋ ರಾಜಕಾರಣ ನಾಳೆ ಇರಲ್ಲ. ಅಂತಹದರಲ್ಲಿ ಇದು ಇನ್ನೂ ಎರಡು ವರ್ಷದ ನಂತರದ ಮಾತು. ಅಷ್ಟರಲ್ಲಿ ಇನ್ನೂ ಯಾರ್ಯಾರು ಯಾವ ಯಾವ ಪಕ್ಷ ಸೇರುತ್ತಾರೋ, ಯಾರ್ಯಾರೂ ಆಕಾಂಕ್ಷಿಗಳಾಗಿ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕೆ ಮಾತ್ರ ದೂರದ ದೆಹಲಿಯಲ್ಲಿ ಕಪ್ಪು ಕೋಟು ಹಾಕಿ ಕುಳಿತಿರೋ ಬ್ರಿಜೇಶ್ ಕಾಳಪ್ಪ ಮಾತ್ರ ಮೈಸೂರು – ಕೊಡಗಿನ ಮೇಲೆ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ.