ನವದೆಹಲಿ: ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಎಚ್.ವಿಶ್ವನಾಥ್ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ದೆಹಲಿಯ ಕರ್ನಾಟಕ ಭವನದಲ್ಲಿ ಬಿಜೆಪಿ ಸಂಸದರನ್ನು ಭೇಟಿ ಮಾಡಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಉಪಹಾರದ ನೆಪದಲ್ಲಿ ವಿಶ್ವನಾಥ್ ಅವರು ಸಂಸದ ಬಿ.ವೈ.ರಾಘವೇಂದ್ರ, ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
Advertisement
Advertisement
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಚ್.ವಿಶ್ವನಾಥ್, ರಾಜಿನಾಮೆ ನೀಡುವುದಾದರೆ ಎಲ್ಲರಿಗೂ ಹೇಳಿಯೇ ನೀಡುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಾಗ ಮಾಧ್ಯಮಗಳಿಗೆ ಹೇಳಿಯೇ ನೀಡಿದ್ದೇನೆ. ಯಾವುದಾದರೂ ಒಳ್ಳೆಯ ಕೆಲಸ ಮಾಡುವ ಮುನ್ನ ದೇವಸ್ಥಾನಕ್ಕೆ ಹೋಗುವುದು ರೂಢಿ, ಮಂಗಳವಾರ, ಅಮಾವಾಸ್ಯೆ ಗ್ರಹಣ ಇತ್ತು. ಹೀಗಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಕೆಲ ಸ್ನೇಹಿತರೊಂದಿಗೆ ಗುವಾಹಟಿಯ ಕಾಮಾಕ್ಯ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದ್ದೆ. ಇದೇ ವೇಳೆ ಹೊಸ ಸರ್ಕಾರದ ನಮ್ಮ ಸಂಸದರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ದೆಹಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ರಾಜ್ಯ ನಾಯಕರು ವಿಫಲ
ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ. ಮೈತ್ರಿ ಸರ್ಕಾರ ಪ್ರಯೋಗವಿದ್ದಂತೆ ಅದನ್ನು ನಿಭಾಯಿಸುವುದು ರಾಜಕೀಯ ಚತುರತೆ. ಈ ಪ್ರಯೋಗ ಯಶಸ್ವಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನ ಮಾಡುತ್ತಿಲ್ಲ. ಮೈತ್ರಿ ನಿಭಾಯಿಸುವಲ್ಲಿ ರಾಜ್ಯ ನಾಯಕರು ವಿಫಲವಾಗಿದ್ದು, ರಾಷ್ಟ್ರ ರಾಜಕಾರಣದ ಮುಂದೆ ರಾಜ್ಯ ನಾಯಕರು ಬೆತ್ತಲಾಗಿದ್ದಾರೆ ಬೇಸರ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರ ನಿಭಾಯಿಸುವ ಸಾಮರಸ್ಯ ಇಲ್ಲ. ರಾಷ್ಟ್ರದ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಇಬ್ಬರೂ ವಿಫಲರಾಗಿದ್ದಾರೆ ಎಂದು ಸಿಎಂ ಮತ್ತು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮುಂಖಡನನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿ ಸೇರುತ್ತೇನೆ ಎಂದಲ್ಲ. ರಾಜ್ಯದಲ್ಲಿ ಬಿಜೆಪಿ ಸಂಸದರು ಹೆಚ್ಚಿದ್ದಾರೆ. ಅವರಿಗೆ ಶುಭಾಶಯ ಕೋರಿದಾಕ್ಷಣ ನಾನು ಬಿಜೆಪಿ ಸೇರಿದಂತಲ್ಲ ಎಂದು ವಿಶ್ವನಾಥ್ ತಿಳಿಸಿದರು.