– ಜೆಡಿಎಸ್ ಅಂದ್ರೆ ಕಣ್ಣೀರು, ಕಣ್ಣೀರು ಅಂದ್ರೆ ಜೆಡಿಎಸ್
– ಹೇಡಿ, ಪಲಾಯನವಾದಿ, ನೀನೊಬ್ಬ ಸುಳ್ಳುಗಾರ
ಮೈಸೂರು: ಚಾಮುಂಡೇಶ್ವರಿ ಬೆಟ್ಟದಲ್ಲಿ ಮಹಾಭಾರತದ ಕ್ಲೈಮ್ಯಾಕ್ಸ್ ಸೀನ್ ನಡೆದಿದ್ದು, ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ದುರ್ಯೋಧನನಿಗೆ ಹೋಲಿಸಿ ಅನರ್ಹ ಶಾಸಕ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಿರೀಕ್ಷೆಯಂತೆಯೇ ಇಂದು ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಹೈ ಡ್ರಾಮಾ ನಡೆದಿದೆ. ಇಬ್ಬರೂ ನಾಯಕರೂ ಬೆಟ್ಟಕ್ಕೆ ಆಗಮಿಸಿ ಒಬ್ಬರಿಗೊಬ್ಬರು ಮಾತನಾಡದೇ ತೆರಳಿದರು.
Advertisement
ದೇವಾಲಯದ ಹೊರ ಆವಣರದಲ್ಲಿ ಮಹೇಶ್ ಅವರಿಗೆ ಒಂದು ಗಂಟೆ ಕಾದು ಬೆಟ್ಟದಿಂದ ಕೆಳಗಿಳಿದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಖಾಮುಖಿಯಾಗಲು ನಾನು ತಯಾರಾಗಿಯೇ ಬಂದಿದ್ದೆ ಮಾಜಿ ಸಚಿವ ಸಾರಾ ಮಹೇಶ್ ಒಳಗೆ ಹೋದವರು ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ನಾನು 8:50ಕ್ಕೆ ಬಂದು ದೇವಿಯ ದರ್ಶನ ಮಾಡಿ 9:05ಕ್ಕೆ ಬಂದು ಹೊರಗೆ ನಿಂತೆ. ಅವರು ಒಳಗೆ ಹೋದವರು ವಾಪಸ್ ಬರಲೇ ಇಲ್ಲ. ನಾನು 10 ಗಂಟೆಯವರೆಗೂ ಕಾದೆ. ನಂತರ ಅವರು ನಿಮ್ಮ ಮುಖ ನೋಡುವುದಿಲ್ಲವಂತೆ ಎಂದು ಮಾಧ್ಯಮದವರು ಹೇಳಿದರು. ನೀವೇ ಪ್ರಮಾಣ ಮಾಡಬೇಕು ಎಂದು ಹೇಳಿದ್ದು, ನನಗೇನು ಹುಚ್ಚು ಹಿಡಿದಿದೆಯಾ ಪ್ರಮಾಣ ಮಾಡೋಕೆ? ಆಣೆ ಪ್ರಮಾಣದ ವಿಚಾರ ಇಲ್ಲಿ ಬರುವುದೇ ಇಲ್ಲ ಎಂದರು.
Advertisement
ನಾನು ಕೇವಲ ಸಾ.ರಾ.ಮಹೇಶ್ ಮಾಡಿದ್ದ ಆರೋಪಕ್ಕೆ ಉತ್ತರಿಸಲು ಬಂದಿದ್ದೆ. 25 ಕೋಟಿ ರೂ.ಗೆ ನನ್ನನ್ನ ಕೊಂಡುಕೊಂಡವನನ್ನು ಕರೆದುಕೊಂಡು ಬಾ ಅವನನ್ನು ಮೀಟ್ ಮಾಡೋಣ ಎಂದಿದ್ದೆ. ಕೊನೆಗೂ ಅವರು ಬರಲೇ ಇಲ್ಲ. ಆತನನ್ನು ಕರೆದುಕೊಂಡು ಬರಲಿಲ್ಲ. ನಾವು ಪಾಂಡವರು ಅವರು ಕೌರವರು, ಮಹಾಭಾರತದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಅಡಗಿ ಕುಳಿತ ಹಾಗೆ ಒಳಗೆ ಸಾರಾ ಮಹೇಶ್ ಕೂತಿದ್ದ ಎಂದು ದುರ್ಯೋಧನನಿಗೆ ಸಾರಾ ಮಹೇಶ್ ಅವರನ್ನು ಹೋಲಿಸಿದರು.
ನಾವು ಪಾಂಡವರ ರೀತಿ ಹೊರಗೆ ಕಾಯುತ್ತಿದ್ದೆವು. ದುರ್ಯೋಧನ ಹೇಗೆ ಬರಲಿಲ್ಲವೋ ಹಾಗೆ ಸಾರಾ ಬರಲಿಲ್ಲ, ಮಹೇಶ್ ನೀನು ಬರಲೇ ಇಲ್ಲ ಹೇಡಿ. ನೀನು ಪಲಾಯನವಾದಿ, ನೀನೊಬ್ಬ ಸುಳ್ಳ, ಇನ್ನು ಮುಂದೆ ಸುಳ್ಳು ಹೇಳಬೇಡ. ಜೆಡಿಎಸ್ ಅಂದರೆ ಕಣ್ಣೀರು, ಕಣ್ಣೀರು ಅಂದರೆ ಜೆಡಿಎಸ್. ಸಾ.ರಾ.ಮಹೇಶ್ ಅಂತಹ ಕೊಚ್ಚೆಗುಂಡಿಗೆ ನಾನು ಕಲ್ಲು ಎಸೆಯುವುದಿಲ್ಲ ಎಂದರು.
ನಾನು ನಿಲ್ಲಿಸೋಣ ಎಂದು ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಇಲ್ಲಿಗೆ ನಿಲ್ಲಿಸೋಣ. ಅವರು ಸಾಬೀತು ಮಾಡಬೇಕಿತ್ತು ಮಾಡಿಲ್ಲ. ಇನ್ನು ಮುಂದೆ ಸಾರಾ ಮಹೇಶ್ ವಿಚಾರವನ್ನು ನಾನು ಮಾತನಾಡುವುದಿಲ್ಲ. ಅವರು ನನ್ನ ವಿಚಾರ ಮಾತನಾಡುವುದು ಬೇಡ, ಇದು ಇಲ್ಲಿಗೆ ನಿಲ್ಲಲಿ ಎಂದು ಹೇಳಿದರು.
ಚಾಮುಂಡಿಬೆಟ್ಟದಿಂದ ಇಳಿದು ಬಂದು ಹೆಚ್.ವಿಶ್ವನಾಥ್ ಸ್ನೇಹಿತರೊಂದಿಗೆ ಹೊಟೇಲ್‍ನಲ್ಲಿ ತಿಂಡಿ ಸೇವಿಸಿದರು. ಇನ್ನು ಸಾ.ರಾ.ಮಹೇಶ್ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಸ್ನೇಹಿತರೊಂದಿಗೆ ತಿಂಡಿ ಸೇವಿಸಿದರು.