– ಲೈಂಗಿಕ ದೌರ್ಜನ್ಯ ಪ್ರಕರಣ- ಮೇ 20ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್. ಡಿ ರೇವಣ್ಣ (H.D Revanna) ಅವರ ಮಧ್ಯಂತರ ಜಾಮೀನು ಸೋಮವಾರದವರೆಗೆ ಮುಂದುವರಿಕೆಯಾಗಿದೆ.
ಕಿಡ್ನಾಪ್ ಕೇಸ್‍ನಲ್ಲಿ ಈಗಾಗಲೇ ಮಧ್ಯಂತರ ಜಾಮೀನು ಮಂಜೂರು ಆಗಿದೆ. ಈ ನಡುವೆ ಇಂದು ಮುಖ್ಯ ಜಾಮೀನು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಿತು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೇ 20 ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು.
Advertisement
Advertisement
ಸಂತ್ರಸ್ತೆಯ ಸ್ವ-ಇಚ್ಚಾ ಹೇಳಿಕೆಯನ್ನು ಓದಿದ ಎಸ್‍ಪಿಪಿ, ನಾನು ಆ ಮನೆಗೆ ಸೇರಿದಾಗ ನನ್ನ ಪ್ರಜ್ವಲ್ ರೇವಣ್ಣ ಬಗ್ಗೆ ಎಚ್ಚರಿಕೆ ನೀಡುತ್ತಾ ಇದ್ದರು. ಪ್ರಜ್ವಲ್ ಪದೇ ಪದೇ ಬಂದು ಮೈ ಮುಟ್ಟಿ ಎಳೆಯುತ್ತಾ ಇದ್ದರು. ಎಣ್ಣೆ ಹಚ್ಚು ಬಾ ಎಂದು ಹೇಳುತ್ತಾ ಇದ್ದರು. ರೇವಣ್ಣ ಕೂಡ ನನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಹೊಟ್ಟೆ ಎದೆಯ ಭಾಗವನ್ನು ಮುಟ್ಟಿ ಎಳೆದಾಡಿದ್ದಾರೆ. ರೇವಣ್ಣ ವರ್ತನೆ ಬಗ್ಗೆ ದೂರು ನೀಡಿದ್ರು ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಹೇಳಿದರು.
Advertisement
ಭವಾನಿ ಅವರಿಗೂ ಈ ಮಾಹಿತಿಯನ್ನು ನೀಡಿದ್ದೇನೆ ಯಾವುದೇ ಉಪಯೋಗ ಆಗಿಲ್ಲ. ಭವಾನಿ ಇಲ್ಲದ ಸಮಯದಲ್ಲಿ ಸೊಂಟ ಜಿಗುಟುತ್ತಿದ್ದರು. ರೇವಣ್ಣ ಲೈಂಗಿಕ ಕಿರುಕುಳ ಇಷ್ಟಕ್ಕೆ ನಿಂತಿಲ್ಲ. ಆಶ್ರಯ ಮಂಜೂರು ಮನೆಯಿಂದ ಹೊರ ಹಾಕಿದ್ದರು. ಈ ಮೂಲಕ ಗೊತ್ತಾಗ್ತಾ ಇದೆ ಲೈಂಗಿಕ ದೌರ್ಜನ್ಯ ನಡೆದಿದೆ. ಸಂತ್ರಸ್ತ ಮಹಿಳೆಯೇ ಹೇಳಿಕೊಂಡಿದ್ದಾರೆ. ಈಗ ಅದೇ ಎಫ್ ಐ ಆರ್ ಗೆ 376 ಅನ್ನು ಸೇರಿಸಲಾಗಿದೆ. ಸೆಕ್ಷನ್ ಸೇರ್ಪಡೆಯಾಗಿರೋದ್ರಿಂದ ಈ ಪ್ರಕರಣ ಸೆಷನ್ಸ್ ಕೋರ್ಟ್ ಅಲ್ಲಿ ನಡೆಯಬೇಕು. 376 ಜಾಮೀನು ರಹಿತ ಪ್ರಕರಣ ಈ ಅರ್ಜಿ ವಿಚಾರಣೆ ನಡೆಯಲು ಇಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು.
Advertisement
ಎಸ್‍ಐಟಿ ಪರ ವಕೀಲರು, ಸೆಷನ್ ಕೋರ್ಟ್ ಅಲ್ಲಿ ನಡೆಯಬೇಕಾಗಿರೋದ್ರಿಂದ ಈ ಜಾಮೀನು ಅರ್ಜಿ ಇಲ್ಲಿ ನಡೆಯೋದು ಸರಿಯಲ್ಲ. ಇದೆಲ್ಲವನ್ನೂ ಕೂಡ ಓಪನ್ ಕೋರ್ಟ್ ಅಲ್ಲಿ ಹೇಳಲು ಸಾಧ್ಯವಿಲ್ಲ. ಇನ್ ಕ್ಯಾಮರಾ ಅಲ್ಲಿ ವಿವರವಾಗಿ ಹೇಳಬಹುದು. ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಗೆ ಜಾಮೀನು ನೀಡುವ ವ್ಯಾಪ್ತಿ ಇಲ್ಲ. ಬೇಲೆಬಲ್ ಸೆಕ್ಷನ್ ಇದ್ದಾಗ ಮಾತ್ರ ಸೆ.436 ಪ್ರಕಾರ ಜಾಮೀನು ನೀಡಬಹುದು. ಆದ್ರೆ ಈ ಪ್ರಕರಣದಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಇರೋದ್ರಿಂದ ಸೆ.436 ಅಡಿ ಜಾಮೀನು ನೀಡುವಂತಿಲ್ಲ. ನಾನ್ ಬೇಲೆಬಲ್ ಸೆಕ್ಷನ್ ಇರೋದ್ರಿಂದ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕು. ಹೀಗಾಗಿ ಸೆ.436 ಅಡಿ ಈ ಕೋರ್ಟ್ ನಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದರು.
ರೇವಣ್ಣ ಪರ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಇದಾಗಿದೆ. ಆ ಪೊಲೀಸ್ ಠಾಣೆಯಲ್ಲಿ 354ಎ ಹಾಗೂ 506-509 ಪ್ರಕರಣ ದಾಖಲಾಗಿದ್ದು, ಇವೆಲ್ಲಾ ಜಾಮೀನು ಸಹಿತ ಪ್ರಕರಣಗಳಾಗಿವೆ. ಹೀಗಾಗಿ ಜಾಮೀನು ನೀಡಬಹುದಾಗಿದೆ. ಸಂತ್ರಸ್ತ ಮಹಿಳೆ ಏ. 28 ರಂದು ದೂರು ನೀಡಿದ್ದಾಳೆ. ಅಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಆಗಿದೆ. ಲೈಂಗಿಕ ದೌರ್ಜನ್ಯ 28 ಏಪ್ರಿಲ್ ಅಲ್ಲಿ ಆಗಿದ್ಯಾ…?. ಅತ್ಯಾಚಾರ ಏ.28 ರಂದು ಆಗಿದ್ಯಾ?. ಇಲ್ಲ ಏಪ್ರಿಲ್ ತಿಂಗಳ ಯಾವುದಾದರೂ ದಿನದಂದು ನಡೆದಿದ್ಯಾ …? ಅಪರಾಧ ಎರಡು ದಿನ, ಎರಡು ತಿಂಗಳ ಮುಂಚೆ ಆಗಿಲ್ಲ. ಇದು ಐದು ವರ್ಷಗಳ ಹಿಂದೆ ನಡೆದಿದೆ ಎಂಬುದಲ್ಲ. ಅನೇಕ ವರ್ಷಗಳಾಗಿವೆ ಎಂದು ತಿಳಿಸಿದರು.
ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರ ಜಾಮೀನು ಭವಿಷ್ಯ ಮೇ 20 ಕ್ಕೆ ನಿರ್ಧಾರವಾಗಲಿದೆ.