ಹಾಸನ: ಬಜೆಟ್ (Budget 2025) ಪುಸ್ತಕದಲ್ಲಿ ನಮ್ಮ ಜಿಲ್ಲೆಯ (Hassan) ಹೆಸರೇ ಇರಲಿಲ್ಲ ಆದರೂ ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದ ಮುಖ್ಯಮಂತ್ರಿಗಳು 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಮುಂದುವರಿಸಿದ್ದಾರೆ. ಜಿಲ್ಲೆಗೆ ತೋಟಗಾರಿಕೆ ಕಾಲೇಜು ಮಂಜೂರು ಮಾಡ್ತಾರೆ, ಫ್ಲೈಓವರ್‌ಗೆ ಅನುದಾನ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳಿಗೆ ಹಣ ಬಿಡುಗಡೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ರೂ. ಕೊಡ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಜಿಲ್ಲೆಗೆ ಬಜೆಟ್‍ನಲ್ಲಿ ಯಾವುದೇ ಯೋಜನೆ ನೀಡಿಲ್ಲ. ಹಾಗಾಗಿ ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ದುದ್ದ ಪೊಲೀಸ್ ಠಾಣೆಯಲ್ಲಿ ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕಿಕೊಂಡು ಬಂದು, ಕಂಪ್ಲೆಂಟ್ ಕೊಡಲು ಬಂದವರಿಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಜಿಲ್ಲೆಯಲ್ಲಿ ಮಟ್ಕಾ, ಜೂಜು ದಂಧೆ ನಡೆಯುತ್ತಿದೆ. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮದ್ಯ ಚಟದಿಂದ ಅವರ ಮನೆಯ ಹೆಣ್ಣುಮಕ್ಕಳ ಒಡವೆ ಮಾರಿಕೊಳ್ಳುತ್ತಿದ್ದಾರೆ. ಕೆಳಗಿನ ಅಧಿಕಾರಿಗಳ ಮೇಲೆ ಎಸ್ಪಿಯವರಿಗೆ ನಿಯಂತ್ರಣ ಇಲ್ಲದಂತಾಗಿದೆ. ಯುವಕರು ಎಲ್ಲೆಂದರಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಎಸ್ಪಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಬೇಡ ಎಂಬ ಸಚಿವ ಕೆ.ಎನ್.ರಾಜಣ್ಣ (K.N Rajanna) ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಅವರೆಲ್ಲ ದೊಡ್ಡವರು ನಾವು ಮಾತನಾಡಲ್ಲ ಎಂದಿದ್ದಾರೆ.