ಬೆಂಗಳೂರು: ಡಿ.ಕೆ ಶಿವಕುಮಾರ್ (D.K Shivakumar) ಸಿಎಂ ಆಗಲಿ ಎಂದು ಹೇಳಿದ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji), ದೇವೇಗೌಡರಿಗೆ (H.D Deve Gowda) ಅಪಮಾನ ಆಗಿರುವ ಬಗ್ಗೆ ಯಾಕೆ ಮಾತಾಡಲಿಲ್ಲ? ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂಬ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಸ್ವಾಮೀಜಿ ಹಿಂದೆ ಯಾವ ರೀತಿ ಇದ್ದರು ಎಂಬುದನ್ನ ಮೊದಲು ಅವರು ಹೇಳಲಿ. ದೇವೇಗೌಡರ ಬಗ್ಗೆ ಒಂದು ತಿಂಗಳಿಂದ ಏನೇನು ನಡೆದಿದೆ? ಕೃತಜ್ಞತೆಗಾದರೂ ಸ್ವಾಮೀಜಿ ಮಾತಾಡಬಹುದಿತ್ತು. ನಮ್ಮ ನಾಯಕರು, ನಮ್ಮ ಸಮಾಜದ ಮುಖಂಡರು ವಿರುದ್ಧ ಕೆಲವರು ಯಾವ ರೀತಿ ನಡೆಸುತ್ತಿದ್ದಾರೆ ಎಂದು ನೋಡಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ
ಸಿಎಂ ಯಾರನ್ನು ಮಾಡಿಕೊಂಡರೆ ನಮಗೇನು? ಆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಅದು ಸಂಬಂಧಪಟ್ಟಿದ್ದು. ನಮಗೇನು ಸಂಬಂಧವಿಲ್ಲ. ಚಂದ್ರಶೇಖರನಾಥ ಸ್ವಾಮೀಜಿ ಒಂದು ತಿಂಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ ಸೌಜನ್ಯಕ್ಕಾದರೂ ಮಾತಾಡಬಹುದಿತ್ತು ಎಂದು ಅವರು ಕಿಡಿಕಾರಿದ್ದಾರೆ.
ಮಠಕ್ಕೆ ದೇವೇಗೌಡರು ಎಷ್ಟು ಸಹಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನನ್ನ ಬಗ್ಗೆ ಮಾತಾಡೋದು ಬೇಡ. ದೇವೇಗೌಡರ ಬಗ್ಗೆ ಒಂದು ತಿಂಗಳಿಂದ ಮಾಧ್ಯಮಗಳಲ್ಲಿ ಏನೇನು ಬಂತು. ಕೆಂಪೇಗೌಡರ ಕಾರ್ಯಕ್ರಮ ಅದು. ದೊಡ್ಡವರು ಮಠಕ್ಕೆ ಏನು ಮಾಡಿದ್ದರು ಎಂದು ಹೇಳಬಹುದಿತ್ತು. ಸ್ವಾಮೀಜಿ ನಮ್ಮ ಪರ ಮಾತಾಡಿ ಎಂದು ನಾನು ಹೇಳಿಲ್ಲ. ಒಂದು ಸಮಾಜದ ಮುಖಂಡರನ್ನ ಈ ರೀತಿ ಅವಹೇಳನಕಾರಿಯಾಗಿ ಒಂದು ತಿಂಗಳಿಂದ ನಡೆಸಿಕೊಂಡಿದ್ರು. ಅದನ್ನು ಖಂಡಿಸಬೇಕಾಗಿತ್ತು ಎಂದು ಸ್ವಾಮೀಜಿ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪುಮಾಡಿದ್ರೆ ಕ್ರಮ ಆಗಲಿ: ಹೆಚ್.ಡಿ.ರೇವಣ್ಣ