ಹಾಸನ: ಕುಟುಂಬ ರಾಜಕಾರಣ ಕೊನೆಗಾಣಿಸಲು ರಾಷ್ಟ್ರೀಯ ಪಕ್ಷಗಳೇ ಹೊಸ ಕಾನೂನು ತರಲಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಬಿಜೆಪಿಗೆ ತಿರುಗೇಟು ನೀಡಿದರು.
ನಗರದ ಸಂಸದರ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಕುಟುಂಬ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಹಲವು ದಶಕದಿಂದ ಕುಟುಂಬ ರಾಜಕೀಯ ನಡೆಯುತ್ತಿದೆ. ಇದನ್ನು ಕೊನೆಗಾಣಿಸಲು ರಾಷ್ಟ್ರೀಯ ಪಕ್ಷದ ನಾಯಕರೇ ಹೊಸ ಕಾನೂನು ತರಲಿ. ಅದಕ್ಕೆ ನಮ್ಮ ಸ್ವಾಗತವಿದೆ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ನಟ ಕಮಲ್ ಹಾಸನ್‍ಗೆ ಕೊರೊನಾ ಸೋಂಕು ದೃಢ
ಪ್ರವಾಹ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಕೆಲ ದಿನದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣ 1 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆಹಾನಿ ಸಂಭವಿಸಿದೆ. ಆದರೆ ಸರ್ಕಾರ ರೈತರಿಗೆ ಯಾವುದೇ ನೆರವು ನೀಡುವಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ವಿಪರೀತ ಮಳೆಯ ಕಾರಣ ಮೆಕ್ಕೆಜೋಳ, ರಾಗಿ, ಭತ್ತ, ಕಾಫಿ, ತರಕಾರಿ ಸೇರಿದಂತೆ ಇತರೆ ಪ್ರಮುಖ ಬೆಳೆ ನಾಶವಾಗಿದೆ. 29 ಸಾವಿರ ಹೆಕ್ಟೇರ್ ಕಾಫಿ, 4,200 ಹೆಕ್ಟೇರ್ ಕಾಳುಮೆಣಸು, 2,000 ಹೆಕ್ಟೇರ್ ತರಕಾರಿ ಮತ್ತು ಇತರೆ ಬೆಳೆ 1,000 ಹೆಕ್ಟೇರ್‌ನಲ್ಲಿ ನಾಶವಾಗಿದೆ. ಇಲಖೆ ಸಮೀಕ್ಷೆ ಪ್ರಕಾರ 425 ಕೋಟಿ ರೂ ನಷ್ಟದ ಅಂದಾಜು ಮಾಡಲಾಗಿದೆ ಆದರೆ ಇದಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಏರ್‌ಟೆಲ್ ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ
ರೈತರ ನೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಬಿಜೆಪಿ ಸರ್ಕಾರ ಹೆಕ್ಟೇರ್‌ಗೆ ಕೇವಲ 6,000 ರೂ. ಪರಿಹಾರ ನೀಡಲು ಹೊರಟಿದೆ. ಇದು ರೈತರಿಗೆ ವೈಜ್ಞಾನಿಕ ಪರಿಹಾರವಲ್ಲ ಎಂದು ರೇವಣ್ಣ ಕಿಡಿಕಾರಿದರು.
ಮಳೆಯ ಕಾರಣ ಜಿಲ್ಲೆಯ ಬಹುತೇಕ ರಸ್ತೆ ಗುಂಡಿಮಯವಾಗಿದೆ. ಇವುಗಳ ದುರಸ್ತಿ ಮಾಡದೇ ಎಲ್ಲಾ ಇಲಾಖೆಯಲ್ಲಿಯೂ ಸಹ ಹಣ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಅಲ್ಲದೇ ಸಚಿವರಿಗೆ ಸರ್ಕಾರದ ಮಟ್ಟದಲ್ಲಿ ಪರ್ಸಂಟೇಜ್ ಹೋಗುತ್ತಿದೆ ಎಂದು ಆರೋಪಿಸಿದರು.