ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ನೀಡಿದರು.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಸಂಪೂರ್ಣ ಕಷ್ಟದಲ್ಲಿ ಇರೋದು ಮಾತುಕತೆ ನಂತರ ಗೊತ್ತಾಗಿದೆ. ಸಾವಿಗೆ ಕಾರಣಕರ್ತರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಕುಟುಂಬದ ಅಭಿಪ್ರಾಯ ಕೂಡಾ ಅದೇ ಆಗಿದೆ. ನೋವನ್ನ ನಮ್ಮ ಮುಂದೆ ಹೇಳಿಕೊಂಡಿದ್ದಾರೆ. ಕಾಟಾಚಾರದ ತನಿಖೆ ಆಗಬಾರದು. ವಿಧವೆ ತಂಗಿಯನ್ನು ಸಾಕುವ ಜವಾಬ್ದಾರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಸರಣಿ ಹತ್ಯೆ ಪ್ರಕರಣ- ದಕ್ಷಿಣ ಕನ್ನಡಕ್ಕೆ DGP ಪ್ರವೀಣ್ ಸೂದ್ ಭೇಟಿ
ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲು ಆಗದೆ ತನಿಖಾ ಅಧಿಕಾರ ಹಸ್ತಾಂತರ ಮಾಡಿದೆ. ರಾಜ್ಯ ಬಿಜೆಪಿ ಸರ್ಕಾರ ಬೇಜವಾಬ್ದಾರಿ ತೀರ್ಮಾನ ತೆಗೆದುಕೊಂಡಿದೆ. ನಮ್ಮ ಅಧಿಕಾರಿಗಳು ಬಹಳ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯದ ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ನಡೆ ಇದು. ಈ ಹಿಂದೆ NIA ಕೊಟ್ಟ ಪ್ರಕರಣಗಳ ರಿಸಲ್ಟ್ ಏನು? ನಮ್ಮ ರಾಜ್ಯದಲ್ಲಿ ಅದೆಷ್ಟೋ ದಕ್ಷ ಅಧಿಕಾರಿಗಳಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಪ್ರವೀಣ್ ಕುಟುಂಬಕ್ಕೆ ನನ್ನ ಮೊಬೈಲ್ ನಂಬರ್ ನೀಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದರೆ ನೇರವಾಗಿ ಕರೆ ಮಾಡಿ ಮಾತನಾಡಬಹುದು. ಅಗತ್ಯಬಿದ್ದರೆ ಮತ್ತೆ ಆರ್ಥಿಕ ಹಣಕಾಸು ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರು ಪೊಲೀಸರ ವಶಕ್ಕೆ