ನವದೆಹಲಿ: ಹರ್ಯಾಣದ (Haryana) ಪಿಂಜೋರ್‌ನಲ್ಲಿರುವ ಹಿಂದೂಸ್ತಾನ್ ಮಷೀನ್ & ಟೂಲ್ಸ್ (HMT) ಕಾರ್ಖಾನೆಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವದೆಹಲಿಯಿಂದ ಮಧ್ಯಾಹ್ನದ ನಂತರ ಕಾರ್ಖಾನೆಗೆ ಭೇಟಿ ನೀಡಿದ ಅವರು, ಇಡೀ ಕಾರ್ಖಾನೆಯನ್ನು ಒಂದು ಸುತ್ತು ಹಾಕಿ ಉತ್ಪಾದನಾ ಚಟುವಟಿಕೆ ವೀಕ್ಷಿಸಿದರು. ಯಂತ್ರಗಳ ಕಾರ್ಯಾಚರಣೆ ವೇಳೆಯಲ್ಲೇ ಉತ್ಪಾದನೆ ಕ್ಷಮತೆಯನ್ನು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಹೆಜ್ಜೆ ಹೆಜ್ಜೆಗೂ ಅಧಿಕಾರಿಗಳಿಂದ ಮಾಹಿತಿ ಕೇಳಿ ತಿಳಿದುಕೊಂಡರು.
ಕಾರ್ಖಾನೆ ವೀಕ್ಷಣೆ ನಂತರ ಉನ್ನತ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು. ಕಾರ್ಖಾನೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಕಾರ್ಖಾನೆ ಹೊಂದಿರುವ ಆಸ್ತಿಗಳು, ಆಸ್ತಿಗಳಿಗೆ ಸಂಬಂಧಪಟ್ಟ ಕೋರ್ಟ್ ವ್ಯಾಜ್ಯಗಳು, ಉದ್ಯೋಗಿಗಳ ಬಿಕ್ಕಟ್ಟುಗಳು ಇತ್ಯಾದಿ ಅಂಶಗಳ ಬಗ್ಗೆ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಕಾರ್ಖಾನೆಯ ಈಗಿನ ಪರಿಸ್ಥಿತಿಯ ಕಳವಳದ ಬಗ್ಗೆ ಸಚಿವರು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಖಾನೆಯ ವಹಿವಾಟು, ಲಾಭ, ಸಾಲ, ಬಾಕಿ ಸೇರಿದಂತೆ ಹಣಕಾಸು ಸ್ಥಿತಿಗತಿಗಳ ಬಗ್ಗೆ ಅಂಕಿ ಅಂಶಗಳನ್ನು ಪಡೆದುಕೊಂಡರು. ಕಾರ್ಖಾನೆಯ ನೌಕರರ ಬಳಿ ಮಾತುಕತೆ, ಕಾರ್ಮಿಕರ ಯೂನಿಯನ್ ಮುಖಂಡರ ಜತೆ ಚರ್ಚೆ ನಡೆಸಿದರು. ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಹೊಣೆ. ಎಲ್ಲರೂ ಬದ್ಧತೆ, ಕ್ಷಮತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದರು. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತದ ಪರಿಕಲ್ಪನೆಯಡಿ ಕೆಲಸ ಮಾಡೋಣ ಎಂದರು.