ವೈದ್ಯ ಸೀಟು ಹಂಚಿಕೆ ವಿಳಂಬ – ಸುಪ್ರೀಂ ಮೊರೆ ಹೋಗುವಂತೆ ಸರ್ಕಾರಕ್ಕೆ ಹೆಚ್‍ಡಿಕೆ ಒತ್ತಾಯ

Public TV
3 Min Read
HDK 2

ಬೆಂಗಳೂರು: ವೈದ್ಯ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಟೀಕಾಪ್ರಹಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Doctor

ಈ ಬಗ್ಗೆ ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವೈದ್ಯ ಸೀಟುಗಳ ಹಂಚಿಕೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳೇ ಮ್ಯಾನೇಜ್ ಮೆಂಟುಗಳಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

ವೈದ್ಯ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ ನೀಟಾಗಿ ತಪ್ಪಿಸುವ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ನೀಟ್ ವ್ಯವಸ್ಥೆಯನ್ನು ಹಾಳು ಮಾಡುವ ಬಗ್ಗೆ ಇದ್ದ ಉತ್ಸಾಹ ಸರಿ ಮಾಡಲು ಇಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಮನವರಿಕೆಯಾಗಿದೆ ಎಂದಿದ್ದಾರೆ.

ಸಮಾನ ಶಿಕ್ಷಣ, ಸಮಾನ ಅವಕಾಶಗಳ ಸಂವಿಧಾನದ ಆಶಯವನ್ನು ಕೇಂದ್ರ ಸರ್ಕಾರ ಗಾಳಿಗೆ ಬಿಟ್ಟಿದೆ. ನಾಲ್ಕು ತಿಂಗಳಿನಿಂದ ವೈದ್ಯ ಸೀಟುಗಳು ಹಂಚಿಕೆಯಾಗಿಲ್ಲ. ಪರಿಣಾಮ ಎಂಜಿನಿಯರಿಂಗ್ ಕೌನ್ಸೆಲಿಂಗ್ ಕೂಡ ತಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಮರ್ಪಕ ನಿರ್ವಹಣೆ, ಅದಕ್ಷತೆಗೆ ಹಿಡಿದ ಕನ್ನಡಿ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರವೇ? ಇದೇ ಸತ್ಯ ಎನ್ನುವಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಗುಣಮಟ್ಟದ ಕೋಚಿಂಗ್ ಪಡೆಯಲು ಶಕ್ತಿ ಇಲ್ಲದ, ಆರ್ಥಿಕವಾಗಿ ದುರ್ಬಲರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯ ಶಿಕ್ಷಣವನ್ನು ಶಾಶ್ವತವಾಗಿ ತಪ್ಪಿಸುವ ದುರಾಲೋಚನೆ ಈ ವಿಳಂಬ ದ್ರೋಹದ ಹಿಂದೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರಗಳು ಅಸಹಾಯತೆಯ ನಾಟಕ ಆಡುತ್ತಾ ವಿದ್ಯಾರ್ಥಿ-ಪೋಷಕರನ್ನು ಯಾಮಾರಿಸುತ್ತಿವೆ. ನೀಟ್ ವಿಳಂಬದಿಂದ ವೈದ್ಯ, ಎಂಜಿನಿಯರಿಂಗ್ ಸೀಟುಗಳ ಕಾಳಸಂತೆ ಬಿಕರಿಗೆ ಸರ್ಕಾರಗಳೇ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಇದ್ಯಾವ ಸೀಮೆ ಶಿಕ್ಷಣ ನೀತಿ? ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರತಿಮೆ ಭಗ್ನ ಮಾಡೋರು ನೀವೇ, ಗೌರವ ಸಲ್ಲಿಸೋರು ನೀವೇ – ಸಿದ್ದು ವಿರುದ್ಧ ಬಿಜೆಪಿ ಕಿಡಿ

ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿ ತ್ವರಿತ ತೀರ್ಪು ನೀಡುವಂತೆ ಮನವಿ ಮಾಡುವುದು ಸೇರಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಭಾರತವನ್ನು ವಿಶ್ವಗುರು ಮಾಡುವ ಉಮೇದಿನಲ್ಲಿರುವ ಕೇಂದ್ರವು, ಗ್ರಾಮೀಣ ವಿದ್ಯಾರ್ಥಿಗಳಿ ಹಿತ ಕಾಯಬೇಕು ಎಂದು ತಿಳಿಸಿದ್ದಾರೆ.

ನೀಟ್ ಅವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರವು ನೆರೆ ರಾಜ್ಯಗಳಂತೆ ದನಿಯೆತ್ತಬೇಕು. ಹಾಗೆ ಮಾಡದಿದ್ದರೆ, ಖಾಸಗಿ ವೈದ್ಯ ಕಾಲೇಜುಗಳ ಜತೆ ರಾಜ್ಯ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜನರು ಭಾವಿಸಬೇಕಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *