ಕಲಾಪ ಹಾಳು ಮಾಡಿದ್ರು, ಈಗ ಪಕ್ಷಗಳಿಂದ ರಾಜಕೀಯ ಕೋವಿಡ್: ಎಚ್‍ಡಿಕೆ

Public TV
6 Min Read
H D KUMARSWAMY

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು, ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿದರು

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಂತಿಯುತವಾಗಿದ್ದ ರಾಜ್ಯವು ಹಿಜಬ್, ಕೇಸರಿ ಶಾಲು ಹಾಗೂ ಈಗ ಶಿವಮೊಗ್ಗದಲ್ಲಿ ಯುವಕನೊಬ್ಬನ ಕೊಲೆ ಕಾರಣದಿಂದ ಇಡೀ ರಾಜ್ಯವೇ ಕುದಿಯುವ ಕುಲುಮೆಯಾಗಿದೆ. ಇಂಥ ಸೂಕ್ಷ್ಮ ಸಮಯದಲ್ಲಿ ರಾಜ್ಯಪಾಲರು ಮೌನವಾಗಿರುವುದು ಸರಿಯಲ್ಲ. ಅವರು ಯಾರ ಕೈಗೊಂಬೆಯೂ ಅಲ್ಲ, ಕೈಗೊಂಬೆ ಆಗಬಾರದು. ಹೀಗಾಗಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಸರ್ಕಾರದಿಂದ ಮಾಹಿತಿ ಪಡೆದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

congress logo 1

ಅಲ್ಲದೆ, ಶೀಘ್ರವೇ ತಾವು ಕೂಡ ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಹಾಗೂ ವಿಧಾನ ಮಂಡಲ ಕಲಾಪವನ್ನು ಸರ್ಕಾರ ಸಮರ್ಪಕವಾಗಿ ನಡೆಸದ ಬಗ್ಗೆ ನಮ್ಮ ಪಕ್ಷದ ವತಿಯಿಂದ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ಸರ್ಕಾರ ವಜಾ ಆಗುವಂತಹ ಪರಿಸ್ಥಿತಿ:
ಕೇಂದ್ರ ಸರಕಾರವೇ ರಾಜ್ಯ ಸರ್ಕಾರವನ್ನು ವಜಾ ಮಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಠಿ ಆಗಿದೆ. ಬಿಜೆಪಿ ಪಕ್ಷದ ಲೋಕಸಭಾ ಸದಸ್ಯರೊಬ್ಬರೇ ಸರಕಾರದ ಅಸಮರ್ಥತೆ ನಮಗೆ ನಾಚಿಕೆ ಉಂಟು ಮಾಡುತ್ತಿದೆ ಅಂತ ಹೇಳಿದ್ದಾರೆ. ಜನರು ಕೂಡ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಲೇಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ರಾಜ್ಯದಲ್ಲಿ ಇಂಥ ಕೆಟ್ಟ ವಾತಾವರಣ ಉಂಟಾಗಲು ರಾಜ್ಯ ಸರಕಾರವೇ ಕಾರಣ. ಅವರ ಅಸಮರ್ಪಕ ಕಾರ್ಯ ವೈಖರಿಯಿಂದ ಇಡೀ ಶಿಕ್ಷಣ ಕ್ಷೇತ್ರ ಬಂದ್ ಮಾಡಿ ಕೂರಿಸಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ ಆಗಿದೆ. ಇನ್ನು ಹೈಕೋರ್ಟ್ ಅಂತೂ ಬಿಬಿಎಂಪಿಗೆ ನಿತ್ಯವೂ ಛೀಮಾರಿ ಹಾಕುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಕಲಿಸುವ ಎಚ್ಚರಿಕೆಯನ್ನು ನೀಡಿದೆ. ನಿಮ್ಮನ್ನು ಜೈಲಿಗೆ ಹಾಕಬೇಕಿತ್ತು. ಆದರೂ ಔದಾರ್ಯ ತೋರಿಸಿದ್ದೇವೆ ಎಂದು ನ್ಯಾಯಮೂರ್ತಿಗಳೇ ಎಚ್ಚರಿಕೆ ನೀಡುತ್ತಿದ್ದಾರೆ. ಈ ಸರ್ಕಾರಕ್ಕೆ ಜನರ ಬಗ್ಗೆ ಬದ್ಧತೆ ಇದೆಯಾ? ಬಹಳ ನೊಂದು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.

web bjp logo 1538503012658

ಕಲಾಪ ಹಾಳು ಮಾಡಿದರು:
ಆಡಳಿತಾರೂಢ ಬಿಜೆಪಿ ಹಾಗೂ ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಎರಡೂ ಕುಮ್ಮಕ್ಕಾಗಿ ವಿಧಾನಮಂಡಲದ ಕಲಾಪವನ್ನು ಸಂಪೂರ್ಣವಾಗಿ ಹಾಳು ಮಾಡಿವೆ. 2022-2023ನೇ ವರ್ಷದ ಮೊದಲ ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಇದಾಗಿತ್ತು. ಸದನದಲ್ಲಿ ಚರ್ಚೆಗೆ ಅವಕಾಶಗಳು ಸಿಗಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳಿಂದ ಇದು ಆಗಲಿಲ್ಲ. ಆದರೆ ಆಡಳಿತ ಪಕ್ಷದ ಸದಸ್ಯರು ವಂದನಾ ನಿರ್ಣಯದ ಮೇಲೆ ಮಾತನಾಡಿದರೂ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು ಬರೀ ಮೋದಿ ಅವರ ಸಾಧನೆಗಳ ಬಗ್ಗೆ ಮಾತ್ರ ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

ಸಿಎಂ ಅವರು ಕಾಂಗ್ರೆಸ್ ಧರಣಿ ಮಧ್ಯೆ ಉತ್ತರ ನೀಡಿದ್ದಾರೆ. ರಾಜ್ಯದ ವಿಧಾನ ಮಂಡಲದ ಇತಿಹಾಸದಲ್ಲಿ ಮೊದಲನೇ ಬಾರಿ ಈ ರೀತಿ ಕಲಾಪ ಬಲಿಯಾಗಿದೆ. ಅತ್ಯಂತ ಮಹತ್ವದ ವಿಚಾರಗಳು ಸದನದಲ್ಲಿ ಚರ್ಚೆ ಆಗಬೇಕಿತ್ತು. ಹಲವಾರು ಬಾರಿ ನಾನು ಹೇಳಿದ್ದೇನೆ. ಗಲಾಟೆ ಮಾಡುವವರನ್ನು ಹೊರ ಹಾಕಿ ಅಥವಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆ. ಆದರೆ, ನಮ್ಮ ಮನವಿಯನ್ನು ಪರಿಗಣಿಸದೇ, ನಮ್ಮ ಪಕ್ಷಕ್ಕೆ ಮಾತನಾಡಲು ಅವಕಾಶವನ್ನು ನೀಡದೇ ಕಲಾಪವನ್ನು ಪ್ರತಿಷ್ಠೆಗೆ ಬಲಿ ಕೊಡಲಾಗಿದೆ ಎಂದು ದೂರಿದರು.

shivamogga murder 1

ರಾಜಕೀಯ ಕೋವಿಡ್:
ಬಡವರ ಮಕ್ಕಳು ವ್ಯಾಸಂಗ ಮಾಡುವಂಥ ಸರಕಾರಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ ನಡುವೆ ದ್ವೇಷ ಭಾವನೆ ಮೂಡಿಸಿ ಅಶಾಂತಿ ಉಂಟು ಮಾಡಲಾಗುತ್ತಿದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯೇ ನಾಶವಾಗುವ ಹಂತ ಮುಟ್ಟಿದೆ. ಬಡಮಕ್ಕಳ ಮೇಲೆ ಆದ ಅನಾಹುತ ಇದರ ಬಗ್ಗೆ ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಕೊರೊನಾ ಅನಾಹುತದಿಂದ ಎರಡು ವರ್ಷದಿಂದ ಶಿಕ್ಷಣ ರಂಗ ಪೂರ್ಣವಾಗಿ ನಾಶವಾಗಿದೆ. ಈ ವರ್ಷವೂ ಸಹ ಕೊರೊನಾ ಅನಾಹುತದ ನಂತರ ‘ರಾಜಕೀಯದ ಕೋವಿಡ್’ ಪ್ರಯೋಗವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಇಡೀ ರಾಜ್ಯಕ್ಕೆ ‘ರಾಜಕೀಯ ಕೋವಿಡ್ ‘ ಅನ್ನು ಹಬ್ಬಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿ ಕಾರಿದರು.

ರಾಜಕೀಯ ಕೋವಿಡ್‍ಗೆ ಔಷಧಿ ಇಲ್ಲ. ಇಡೀ ರಾಜ್ಯದ ನೆಮ್ಮದಿ ಶಾಂತಿಯನ್ನು ಬುಡಮೇಲು ಮಾಡುವ ರಾಜಕೀಯ ಸ್ವಾರ್ಥಕ್ಕೆ ಕೊನೆ ಇಲ್ಲದಾಗಿದೆ. ಅದಕ್ಕೆ ಈ ರೀತಿ ಗದ್ದಲ ಎಬ್ಬಿಸಿ ಕಲಾಪವನ್ನು ಮುಗಿಸಿದರು. ಸದನ ಸುಗಮವಾಗಿ ನಡೆಸಲು ಅವಕಾಶ ಕೊಡಿ. ಮತಾಂತರ ನಿಷೇಧ ಕಾಯ್ದೆ ವಿಷಯ ಇಟ್ಟುಕೊಂಡು ಬೆಳಗಾವಿ ಅಧಿವೇಶನವನ್ನೂ ಹಾಳುಗೆಡವಿದ್ದಾರೆ ಎಂದು ಹೇಳಿದರು.

araga jnanendra 1

ಯಾವ ಪುರುಷಾರ್ಥಕ್ಕೆ ರಾಜ್ಯಪಾಲರ ಭೇಟಿ?
ಸದನದ ಕಲಾಪವನ್ನು ಹಾಳು ಮಾಡಿದ ಅಧಿಕೃತ ಪ್ರತಿಪಕ್ಷವೇ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಹೊರಟಿದೆ. ಅದೂ ರಾಜಭವನದ ತನಕ ನಡೆದುಕೊಂಡು ಹೋಗಿ ಮನವಿ ಕೊಟ್ಟು ಪ್ರಚಾರ ಪಡೆಯುವ ಹುನ್ನಾರ. ಯಾವ ಮುಖ ಇಟ್ಟುಕೊಂಡು ಆ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ? ಈ ನಾಟಕವನ್ನು ಬೇರೆ ರಾಜ್ಯದ ಜನರು ನೋಡಬೇಕೆ ಎಂದು ಗುಡುಗಿದರು.

ಹಿಜಬ್, ಕೇಸರಿ ಶಾಲು ಹಾಗೂ ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಸರ್ಕಾರ ತಪ್ಪು ಹೆಜ್ಜೆಗಳೇ ಕಾರಣ. ಬಡವರ ಮನೆ ಮಕ್ಕಳನ್ನು ಇಂಥ ಘಟನೆಗಳು ಬಲಿ ತೆಗೆದುಕೊಳ್ಳುತ್ತವೆ. ಶ್ರೀಮಂತರ ಮಕ್ಕಳು, ಉಳ್ಳವರ ಮಕ್ಕಳು ಅಥವಾ ಮೇಲ್ಜಾತಿಯವರ ಮಕ್ಕಳು ಇಂಥ ಘಟನೆಗಳಲ್ಲಿ ಭಾಗಿಯಾಗುವುದಿಲ್ಲ. ಎರಡೂ ಹೊತ್ತು ಊಟಕ್ಕೂ ಕಷ್ಟ ಇರುವ ಬಡವರ ಮಕ್ಕಳು ಇಂಥ ಷಡ್ಯಂತ್ರಕ್ಕೆ ಬಲಿ ಆಗುತ್ತಿದ್ದಾರೆ. ಇಂಥ ವಿಷಯಗಳ ಬಗ್ಗೆ ಸದನ ಚರ್ಚೆ ನಡೆಸಬೇಕಿತ್ತು. ಇನ್ನಾದರೂ ರಾಷ್ಟ್ರೀಯ ಪಕ್ಷಗಳು ಬಡಮಕ್ಕಳ ಜೀವನದ ಜತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆಲ್ಲಾ ಕಾರಣ ಯಾರು ಅಂತ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಹಾಗೆ ಆಗಲಿಲ್ಲ. ಇದು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ನ ನೈತಿಕ ಅಧಃ ಪತನವನ್ನು ತೋರಿಸುತ್ತದೆ ಎಂದರು.

ಇಂಥ ಘಟನೆಗಳಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಇಂಥ ಒಬ್ಬ ಯುವಕ ಬಲಿಯಾದರೆ ಆ ಮನೆಯೇ ಬೀದಿಗೆ ಬಿದ್ದಂತೆ. ಆ ತಂದೆ ತಾಯಿ ಭವಿಷ್ಯವೇನು? ಅಂಥ ಕುಟುಂಬಗಳ ಪರಿಸ್ಥಿತಿ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ಯೋಚನೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕೊಲೆ ಆಗಿರುವ ಆ ಯುವಕನದ್ದು ಶ್ರೀಮಂತ ಕುಟುಂಬ ಅಲ್ಲ. ಸಣ್ಣ ಸಮಾಜದ ಹುಡುಗ ಆತ. ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು ಎಂದು ಹೇಳಿದರು.

CM basavaraj bommai

ಶಿವಮೊಗ್ಗ ಘಟನೆಯಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ. ಇಬ್ಬರು ಇಬ್ಬರು ಅಂತಾರೆ, ಇನ್ನೊಬ್ಬರು ಮೂವರು ಅಂತಾರೆ, ಆಮೇಲೆ ಮತ್ತಿಬ್ಬರು 12 ಜನ ಅರೆಸ್ಟ್ ಅಂತಾರೆ. ಯಾರ ಮಾತು ನಂಬುವುದು ಬಿಡುವುದು. ಇದನ್ನೇ ಎಷ್ಟು ದಿನ ಪ್ರಚಾರಕ್ಕೆ ಇಡುತ್ತಿರಾ ಸತ್ಯಾಸತ್ಯತೆ ಯಾವಾಗ ಹೊರ ಬರುವುದು? ಕೇವಲ ಮರಣ ದಳ್ಳುರಿಯನ್ನೇ ಪ್ರಚಾರ ಮಾಡುತ್ತಿರಾ? ಎಂದು ಸರ್ಕಾರವನ್ನು ತೀವ್ರವಾಗಿ ಪ್ರಶ್ನೆ ಮಾಡಿದರು.

ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರೇ. ಕೊಲೆಯಾದ ಯುವಕ ಬಿಜೆಪಿ ಪರಿವಾರಕ್ಕೆ ಸೇರಿದವನು. ಆತನ ಬಗ್ಗೆ ಎಲ್ಲ ಮಾಹಿತಿ ಸರ್ಕಾರದ ಬಳಿ ಇದೆ. ಆತನ ಪ್ರತೀ ಚಲನವಲನ ಎಲ್ಲಾ ಪೆÇಲೀಸರಿಗೆ ಗೊತ್ತಿದೆ. ಆದರೂ ರಕ್ಷಣೆ ನೀಡಲಿಲ್ಲ, ಆತನ ಜೀವ ಉಳಿಯಲಿಲ್ಲ ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದಕೊಂಡರು.

ಸಿಎಎ ಘಟನೆಯಲ್ಲಿ ಮಂಗಳೂರಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಗುಂಡು ಹಾರಿಸಲಾಯಿತು. ನಂತರ 10 ಲಕ್ಷ ಹಣ ಪರಿಹಾರ ನೀಡಿ ಮತ್ತೆ ಅವರನ್ನು ಗೂಂಡಾಗಳು ಅಂತ ಹೇಳಿದ್ದಿರಿ. ಡಿಜೆ ಹಳ್ಳಿಯಲ್ಲಿ ನಡೆದ ಘಟನೆಗೆ ಯಾರು ಕಾರಣ? ಇನ್ನೂ ಅನೇಕ ಯುವಕರನ್ನು ಈಗಲೂ ಜೈಲಿನಲ್ಲೇ ಇಡಲಾಗಿದೆ. ಆದರೆ ಘಟನೆಗೆ ಕಾರಣರಾದವರು ಕೆಪಿಸಿಸಿ ಅಧ್ಯಕ್ಷರ ಹಿಂದೆ ಮುಂದೆ ಆರಾಮಾಗಿ ಓಡಾಡಿಕೊಂಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆಯಂತೆ ಎಂದು ಕಾಂಗ್ರೆಸ್ ಮೇಲೆ ತೀವ್ರ ವಾಗ್ಧಾಳಿ ನಡೆಸಿದರು.

ಶಿವಮೊಗ್ಗದಲ್ಲಿ ನಡೆದ ಘಟನೆ ಪರಿಣಾಮಗಳು ಇಲ್ಲಿಗೇ ನಿಲ್ಲಲ್ಲ. ಸರ್ಕಾರ ಎಚ್ಚರಿಕೆ ವಹಿಸಿ ಇದರ ಬಿಸಿ ಬೇರೆ ಕಡೆ ಹಬ್ಬದಂತೆ ಮಾಡಬೇಕು. ಆದರೆ, ಎರಡು ಪಕ್ಷಗಳು ಮತ ಬ್ಯಾಂಕ್ ಸೃಷ್ಟಿ ಮಾಡಲು ಹೀಗೆ ಮಾಡುತ್ತಿವೆ. ಮತ ಬ್ಯಾಂಕ್‍ಗಾಗಿ ಹೀಗೆ ಬಡವರನ್ನು ಬಳಸಿಕೊಳ್ಳುತ್ತಾ ಇದ್ದಾರೆ. ಅದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್, ಶಾಸಕ ರಾಜಾ ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *