ಬೆಂಗಳೂರು: ಶ್ರೀರಾಮನ ಹೆಸರು ಇಟ್ಟುಕೊಂಡು ಶಾಂತಿ ಹಾಳು ಮಾಡುವ ಕೆಲಸ ಮಾಡುತ್ತಿದ್ದೀರಿ. ಅಂತಹ ಕೃತ್ಯಗಳನ್ನು ಎಸಗಲು ರಾವಣನ ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕೆಲ ಸಂಘಟನೆಗಳ ಮೇಲೆ ವಾಗ್ದಾಳಿ ನಡೆಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕೆಲವರು ರಾಮಸೇನೆ, ಆ ಸೇನೆ ಈ ಸೇನೆ ಅಂತ ಹೆಸರು ಇಟ್ಟಕೊಂಡಿದ್ದಾರೆ. ರಾಮನ ಹೆಸರಿಟ್ಟುಕೊಂಡು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ಅಂತಹವರು ರಾವಣನ ಸೇನೆ ಎಂದು ಹೆಸರಿಟ್ಟುಕೊಂಡರೆ ಉತ್ತಮ. ಇವರು ರಾಮನ ಹೆಸರಿಗೆ ಯಾಕೆ ಕಳಂಕ ತರುತ್ತಿದ್ದಾರೆ. ದಯಮಾಡಿ ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಧುಮೇಹ ನಿರ್ವಹಣೆ ಹೇಗೆ?
Advertisement
Advertisement
ಪದೇ ಪದೇ ಬಿಜೆಪಿ ಸಹ ಸಂಸ್ಥೆಗಳು ಈ ರೀತಿ ಸಾಮರಸ್ಯ ಹಾಳು ಮಾಡುತ್ತಿದೆ. ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರವೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ದಿನಕ್ಕೆ ಒಂದು ವಿಚಾರ ಪ್ರಾರಂಭ ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ರಾಮಭಕ್ತರೇ ಆಗಿದ್ದರೆ, ದಿನನಿತ್ಯದಲ್ಲಿ ನಮ್ಮ ಪರಂಪರಾಗತ ಸಂಪ್ರದಾಯ ಆಚರಣೆಗೆ ಒತ್ತು ಕೊಟ್ಟರೆ ಹಿಂದೂ ಧರ್ಮ ಕಾಪಾಡಿದಂತಾಗುತ್ತದೆ ಆಗುತ್ತದೆ ಎಂದು ಹೇಳಿದರು.
Advertisement
ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರು, ಹೊಳೆನರಸೀಪುರದಲ್ಲಿ ದೀಪದ ಸ್ತಂಭ ಕೈಯಲ್ಲಿ ಇಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ಹೋಗುತ್ತಾ ಇದ್ದೇವು. ದೇವರ ಭಜನೆ ಮಾಡುತ್ತಿದ್ದೇವೆ. ಬೆಳಗ್ಗೆ ದೇವಸ್ಥಾನದಲ್ಲಿ ಸುಪ್ರಭಾತ ಕೇಳಿಸುತ್ತಿತ್ತು. ಘಂಟೆ ನಾದ ಮೊಳಗುತ್ತಿತ್ತು. ಆ ಗಂಟೆನಾದ ಕೇಳಿದರೆ ನಮ್ಮ ಮೈ ನವಿರೇಳುತ್ತಿತ್ತು. ಈ ಮಹಾನುಭಾವರಿಗೆ ಏನಾಗುತ್ತದೆ ಎಂದು ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
Advertisement
ಮತ್ತೊಂದು ಧರ್ಮ ಅಥವಾ ಜಾತಿಯನ್ನು ನಿಂದಿಸುವುದು ಅಥವಾ ಅವಹೇಳನ ಮಾಡುವುದು ಬೇಡ. ಅವರ ನಂಬಿಕೆಗಳಿಗೆ ನೋವುಂಟು ಮಾಡುವುದು ಬೇಡ ಎಂದ ಅವರು, ನನ್ನ ಪ್ರಕಾರ ಶಾಲೆಗಳಲ್ಲಿ ಭಗವದ್ಗೀತೆ ಓದಿಸಿದರೆ ಪ್ರಯೋಜನ ಇಲ್ಲ. ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದನ್ನು ಗಲಾಟೆಕೋರರು ಅರ್ಥ ಮಾಡಿಕೊಳ್ಳಬೇಕು ಪ್ರತಿಕ್ರಿಯೆ ಕೊಟ್ಟರು. ಇದನ್ನೂ ಓದಿ: ಕಷ್ಟದಲ್ಲಿರುವ ಜನರಿಗೆ ಸರ್ಕಾರದಿಂದ ಕರೆಂಟ್ ಶಾಕ್: ಪೃಥ್ವಿ ರೆಡ್ಡಿ
ಮಕ್ಕಳಲ್ಲಿ ನಾವು ಉತ್ತಮ ಗುಣಗಳನ್ನು ಬೆಳೆಸಬೇಕು ನಿಜ. ಕೀರ್ತನೆ, ಭಜನೆ, ದೇವರ ನಾಮಗಳ ಮೂಲಕ ಮಕ್ಕಳನ್ನು ಬೇಗ ನಿದ್ದೆಯಿಂದ ಏಳಿಸಿ. ಆ ಮೂಲಕ ಅವರಲ್ಲಿ ಸಾತ್ವಿಕ ಗುಣಗಳನ್ನು ಬೆಳೆಸಬೇಕು ಎಂದು ಸೂಚಿಸಿದರು. ಆದರೆ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಅಶಾಂತಿ ಸೃಷ್ಟಿ ಮಾಡುತ್ತಿರುವ ಸಂಘಟನೆಗಳು ಇಂತಹ ವಿಷಯಗಳ ಬಗ್ಗೆ ಆಲೋಚನೆ ಮಾಡಬೇಕು. ಈಗ ಅವರೇ ನಮ್ಮ ಸಂಸ್ಕøತಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ವಿಧಾನಸೌಧಕ್ಕೆ ನಮಸ್ಕಾರ ಮಾಡಿದರೆ ಸಾಕಾ? ಹಿಂದೆ ಟೆಂಟ್‍ನಲ್ಲಿ ನಮೋ ವೆಂಕಟೇಶ ಎನ್ನುವ ಭಕ್ತಿಗೀತೆ ಕೇಳಿಸುತ್ತಿದ್ದವು. ರಾತ್ರಿ ಸೆಕೆಂಡ್ ಶೋಗೆ ಮುನ್ನ ಈ ಗೀತೆಯನ್ನು ಹಾಕಲಾಗುತ್ತಿತ್ತು. ಆಗ ಶಬ್ದ ಮಾಲಿನ್ಯ ಇರಲಿಲ್ಲವೆ? ಇದೇನು ಸಂಸ್ಕøತಿನಾ, ದೇಶ ಕಟ್ಟುವ ರೀತಿ ಇದೇನಾ? ರಾಮನ ಹೆಸರಲ್ಲಿ ದೇಶ ಹಾಳು ಮಾಡಬೇಡಿ. ಇದೆಲ್ಲದರ ಹಿಂದೆ ರಾಜಕೀಯ ಅಜೆಂಡಾ ಇದೆ. ನರೇಂದ್ರ ಮೋದಿ ನೋಡಿದರೆ ಸಂಸತ್‍ಗೆ ನಮಸ್ಕಾರ ಮಾಡುತ್ತಾರೆ, ಸಂವಿಧಾನಕ್ಕೆ ಗೌರವ ನೀಡುತ್ತಾರೆ. ಇಲ್ಲಿಯೂ ವಿಧಾನಸೌಧದ ಮುಂಬಾಗದಲ್ಲಿ ಬೊಮ್ಮಾಯಿ ನಮಸ್ಕಾರ ಮಾಡಿದ್ದರು. ಇಂಥ ಕೆಲಸಗಳನ್ನು ಮಾಡಲಿಕ್ಕೆ ವಿಧಾನಸೌಧಕ್ಕೆ ಅಡ್ಡ ಬಿದ್ದಿರಾ ಬೊಮ್ಮಾಯಿಯವರೇ? ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
ಜನರ ಬದುಕಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ ಸರ್ಕಾರ. ಜನರ ಬವಣೆ ಕಡೆಗಣಿಸಿ ಚುನಾವಣೆ ಮಾಡುತ್ತಿರಾ ಮುಖ್ಯಮಂತ್ರಿಗಳೇ? ನೀವು ಮೌನಿ ಬಾಬಾ ಆಗಿದ್ದೀರ, ನಿಮ್ಮಿಂದ ಏನು ಮಾಡೋಕೆ ಆಗುವುದಿಲ್ಲ. ಈ ರಾಜ್ಯದಲ್ಲಿ ಸಿಎಂ ಇದಾರಾ ಅನ್ನುವುದೇ ಅನುಮಾನ. ಸರ್ಕಾರ ಇದೆಯಾ ಎನ್ನುವ ಸಂಶಯ ಬಂದಿದೆ. ಈ ಸರ್ಕಾರವನ್ನು ಯಾರೋ ನಡೆಸುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉದ್ಯಮಗಳು ಮತ್ತು ನವ ಉದ್ಯಮಗಳಿಗೆ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದ ಸಚಿವ ಕೆ ಟಿ ಆರ್ ಅವರು ತಮ್ಮ ರಾಜ್ಯಕ್ಕೆ ಉದ್ಯಮಗಳು ಬರಲಿ ಎಂದು ಆಹ್ವಾನ ನೀಡಿದ್ದಾರೆ. ಅದಕ್ಕೆ ಸಚಿವ ಡಾ. ಅಶ್ವತ್ಥನಾರಾಯಣ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಎಂದು ಅಭಿಪ್ರಾಯಪಟ್ಟರು. ಮೊದಲು ನೀವು ಮನೆ ನೆಟ್ಟಗೆ ಇಟ್ಟುಕೊಳ್ಳಿ. ನಿಮ್ಮ ನೀತಿಗಳು ಸರಿ ಇದ್ದರೆ ಬೇರೆಯವರು ಯಾಕೆ ಬರ್ತಾರೆ. ನಾವು ಕೂಡ ವಿದೇಶಗಳಿಗೆ ಬಂಡವಾಳ ಹೂಡಿಕೆಗೆ ಆಹ್ವಾನ ನೀಡುವುದು ಮಾಡುತ್ತೇವೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ಇದ್ದರೆ ಯಾರು ತಾನೇ ಹೊರಗೆ ಹೋಗುತ್ತಾರೆ ಎಂದು ಐಟಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಬೆಳೆವಣಿಗೆಗಳು ಎಲ್ಲರಿಗೂ ಗೊತ್ತಿದೆ. ಸರ್ಕಾರಕ್ಕೆ ಬೆನ್ನುಮೂಳೆ ಎನ್ನುವುದು ಇದೆಯಾ? ಯಾರನ್ನು ಮೆಚ್ಚಿಸಲು ರಾಜ್ಯ ಆಳುತ್ತಿದ್ದಿರಿ. ನೀವೆಲ್ಲ ಪ್ರಮಾಣ ವಚನ ಸ್ವೀಕಾರ ಮಾಡಿದ್ದೀರಿ. ಅದರ ಉದ್ದೇಶ ಸಚಿವರು ಮರೆತಿರಾ? ಹಲಾಲ್ ಮುಗೀತು, ಈಗ ಆಜಾನ್ ಶುರುವಾಗಿದೆ. ನಾನು ರಾಜ್ಯದ ಜನರಿಗೆ ಮನವಿ ಮಾಡ್ತೀನಿ, ಇಂಥವರನ್ನು ದೂರ ಇಡಿ. ಸಮಾಜಘಾತುಕರನ್ನು ದೂರ ಇಡಿ ಎಂದು ಮನವಿ ಮಾಡುವೆ ಎಂದು ಕರೆ ನೀಡಿದರು.