ನವದೆಹಲಿ: ಸದನದಲ್ಲಿ ಅತ್ಯಾಚಾರ ಕುರಿತ ಹೇಳಿಕೆ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಸ್ಪೀಕರ್ ಆಗಿದ್ದವರು, ಸಾಂವಿಧಾನಿಕ ಹುದ್ದೆಯಲ್ಲಿದ್ದವರು, ಸ್ವಯಂ ಘೋಷಿತ ಸಂವಿಧಾನ ತಜ್ಞರು ಆಗಿರುವ ರಮೇಶ್ ಕುಮಾರ್ ಅವರು ಸದನದಲ್ಲಿ ಮಹಿಳೆಯರಿಗೆ ಘೋರ ಅಪಮಾನ ಮಾಡಿದ್ದಾರೆ. ಅಲ್ಲದೇ ಮಹಿಳೆಯರ ಜತೆಗೆ ಸಭಾಧ್ಯಕ್ಷ ಪೀಠಕ್ಕೂ ಅಪಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರೇಪ್ ಎಂಜಾಯ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ – ರಮೇಶ್ ಪ್ರತಿಕೃತಿಗೆ ಪೊರಕೆ ಸೇವೆ
Advertisement
Advertisement
ಎರಡು ಬಾರಿ ಸ್ಪೀಕರ್ ಆಗಿದ್ದ ಮಹಾನುಭಾವರು ಅದೇ ಪೀಠದಲ್ಲಿ ಕುಳಿತಿದ್ದವರು ಕಲಾಪ ನಡೆಸುವಾಗ ಎದುರಿಸುವ ಕಷ್ಟ, ಒತ್ತಡದ ಪರಿಸ್ಥಿತಿಯನ್ನು ಅತ್ಯಾಚಾರಕ್ಕೆ ಒಳಗಾಗುವ ಅಸಹಾಯಕ ಮಹಿಳೆಗೆ ಹೋಲಿಸುವ ಮೂಲಕ ಸಂವಿಧಾನದತ್ತವಾದ ಸಭಾಧ್ಯಕ್ಷರ ಪೀಠಕ್ಕೆ ಕ್ಷಮಾರ್ಹವಲ್ಲದ ಅಪಮಾನ ಮಾಡಿದ್ದಾರೆ. ಜತೆಗೆ ಸದನದಲ್ಲಿ ಮಹಿಳೆಯರಿಗೂ ಅಪಮಾನ ಮಾಡಿದ್ದಾರೆ. ಕೆಟ್ಟ ಶಬ್ದಗಳನ್ನು ಬಳಕೆ ಮಾಡುವ ಮೂಲಕ ಇಡೀ ಸ್ತ್ರೀ ಕುಲವನ್ನೇ ಹೀಯಾಳಿಸಿದ್ದಾರೆ. ಬುದ್ಧಿಜೀವಿಯ ಸೋಗಿನಲ್ಲಿ ತಮ್ಮ ವಿಕೃತಿ ಪ್ರದರ್ಶನ ಮಾಡಿದ್ದಾರೆ. ಅವರು ಪದೇ ಪದೆ ಇದನ್ನೇ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Advertisement
ಕಲಾಪ ನಡೆಸುವ ಒತ್ತಡದಲ್ಲಿರುವ ಸಭಾಧ್ಯಕ್ಷರ ಪೀಠದ ಎದುರೇ ಈ ರೀತಿ ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ. ಇದು ಸಂಸದೀಯ ವ್ಯವಸ್ಥೆಗೆ ಭೂಷಣವಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಘೋರ ಅಪರಾಧ, ಅದಕ್ಕೆ ಪೂರ್ಣ ವಿರಾಮ ಹಾಕಿ – ರಮೇಶ್ ಕುಮಾರ್ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ
Advertisement
ಮಾಜಿ ಸಿಎಂ ಆಗಿ, ಶಾಸಕರಾಗಿ ಅದಿವೇಶನ ನಡೆಯುವ ಸಂದರ್ಭದಲ್ಲಿ ದೆಹಲಿಯಲ್ಲಿ ಇರುವ ಕುರಿತು ಪ್ರತಿಕ್ರಿಯಿಸಿ, ಸದನದ ಕಲಾಪದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವ ವಿಚಾರಗಳು ಚರ್ಚೆಯಾಗಿವೆ. ಕಲಾಪದಲ್ಲಿ ಏನೆಲ್ಲಾ ಚರ್ಚೆ ಆಗಿದೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ನನ್ನ ತಂದೆಯವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾನು ಮೊದಲೇ ಸ್ಪೀಕರ್ ಅವರ ಬಳಿ ಅನುಮತಿ ಪಡೆದು ದೆಹಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಲಾಪದಲ್ಲಿ ನಡೆಯುತ್ತಿರುವ ಪ್ರತಿಯೊಂದನ್ನು ನಾನು ನೋಡುತ್ತಿದ್ದೇನೆ. ರಾಜ್ಯದ ಅನುಭವಿ ರಾಜಕಾರಣಿ, ಸ್ಪೀಕರ್ ಆಗಿದ್ದವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ರಮೇಶ್ ಕುಮಾರ್ ಅವರ ಮಾತು, ಸ್ಪೀಕರ್ ನಡೆದುಕೊಂಡ ರೀತಿ ಖಂಡನೀಯ. ಮಹಿಳೆಯರ ಬಗ್ಗೆ ಮಾತನಾಡುವಾಗ ಆ ಪದ ಬಳಕೆ ಅಗತ್ಯ ಏನಿತ್ತು? ಮೊದಲು ಮಾತನಾಡಿ ನಂತರ ಕ್ಷಮೆ ಕೋರಿದರೆ ಮುಗಿಯುವುದಿಲ್ಲ. ಇವರೆಲ್ಲಾ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಕುಲಗೆಡಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದೇ ಸದನದ ದಾಖಲೆಯೇ ಎಂದು ಪ್ರಶ್ನಿಸಿದ್ದಾರೆ.