15 ದಿನ ಟೈಂ ಕೊಡಿ, ಬಿಟ್ ಕಾಯಿನ್ ಹಗರಣದ ಪೂರ್ಣ ಮಾಹಿತಿ ನಾನೇ ಕೊಡ್ತೀನಿ: ಎಚ್‍ಡಿಕೆ

Public TV
2 Min Read
h.d.kumaraswamy

ಬೆಂಗಳೂರು: 15 ದಿನ ಸಮಯ ಕೊಡಿ, ಬಿಟ್ ಕಾಯಿನ್ ಹಗರಣದ ಪೂರ್ಣ ಮಾಹಿತಿ ನಾನೇ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಜನತಾ ಪರ್ವ 1.0 ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ ವೇಳೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದಲ್ಲಿ 58,000 ಕೋಟಿ ರೂ. ಅವ್ಯವಹಾರ ಆಗಿದೆ ಅಂತ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಶ್ರೀಕಿ ಎಂಬ ಯುವಕನನ್ನು ಎಂಟರಿಂದ ಹತ್ತು ಬಾರಿ ಬಂಧನ ಮಾಡಲಾಗಿದೆ. 2020ರ ನವೆಂಬರ್‍ನಿಂದ 8-10 ಬಾರಿ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದೂ ಆಗಿದೆ. ಇನ್ನು ಹದಿನೈದು ದಿನ ಸಮಯ ಕೊಡಿ, ಈ ಹಗರಣದ ಬಗ್ಗೆ ನಾನೇ ಪೂರ್ಣ ಮಾಹಿತಿ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ ಅದನ್ನೇ ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಬೇಡಿ: ನಲಪಾಡ್

Bitcoin

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡದೇ ಇದ್ದಿದ್ದರೆ ಬಹುಶಃ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದರೆ ಹಗರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಅಂತ ಅರ್ಥವಲ್ಲ. ಅಮೆರಿಕದಲ್ಲಿ ಅವರಿಗೆ ಆಗಿರುವ ಮುಜುಗರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅಮೆರಿಕದಲ್ಲಿ ಪ್ರಧಾನಿ ಅವರಿಗೆ ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಬಿಟ್ ಕಾಯಿನ್ ಹಗರಣದ ವಿವರ ನೀಡಿದ್ದಾರೆ. ಅಲ್ಲಿ ಅವರಿಗೆ ಕಸಿವಿಸಿ ಆಗಿರುವುದು ನಿಜ. ಹೀಗಾಗಿ ಪ್ರಧಾನಿ ಅವರು ಮೌನವಾಗಿದ್ದರೂ ಇಡೀ ಹಗರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಟ್ ಕಾಯನ್ ಪ್ರಕರಣ ಕಳೆದ 15 ದಿನಗಳಿಂದ ಸದ್ದು ಮಾಡುತ್ತಿದೆ. ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡುವಂತೆ ನಾಯಕರಿಗೆ ಹೇಳಲು ಬಯಸುತ್ತೇನೆ ಎಂದು ಸಲಹೆ ನೀಡಿದ್ದಾರೆ.

SRIKI 1

ತನಿಖೆ ಹಾದಿ ತಪ್ಪಿಸುವುದು ಬೇಡ
ನಾನು ಈಗಾಗಲೇ ಜನಧನ್ ಖಾತೆಗಳಿಂದ ಹಣ ಎತ್ತಿರುವುದನ್ನು ಕೂಡ ಹೇಳಿದ್ದೇನೆ. ಈ ಬಗ್ಗೆ ಕೂಡ ಕೇಂದ್ರ ಗಂಭೀರವಾಗಿದೆ ಎನ್ನುವುದು ನನ್ನ ಭಾವನೆ. ಸುಖಾಸುಮ್ಮನೆ ಕಾಂಗ್ರೆಸ್ ನಾಯಕರು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ತನಿಖೆಯ ಹಾದಿ ತಪ್ಪಿಸುವುದು ಬೇಡ. ಅದಕ್ಕೆ ಅವರು ಕಾರಣರಾಗುವುದು ಬೇಡ ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ಲಸಿಕೆಯ 2ನೇ ಡೋಸ್ ಪಡೆಯಲು ಜನರ ಹಿಂದೇಟು- ವ್ಯಾಕ್ಸಿನ್ ವಿತರಣೆಗೆ ಹೊಸ ಯೋಜನೆ

ಕಾಂಗ್ರೆಸ್ ಪಕ್ಷದ್ದು ಓಲೈಕೆ ರಾಜಕಾರಣ, ಜೆಡಿಎಸ್ ಪಕ್ಷದ್ದು ಕುಟುಂಬ ರಾಜಕಾರಣ ಎಂದು ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ ಬಿಜೆಪಿಯವರದ್ದು ಯಾವ ರಾಜಕಾರಣ? ಶಾಸಕ ಅಪ್ಪಚ್ಚು ರಂಜನ್ ಸಹೋದರ ಎಂಎಲ್ಸಿ, ಜಗದೀಶ್ ಶೆಟ್ಟರ್ ತಮ್ಮ ಕೂಡ ಎಂಎಲ್ಸಿ, ಉದಾಸಿ ಕುಟುಂಬದ ಕಥೆ ಏನು? ಕುಟುಂಬ ರಾಜಕಾರಣ ಅಲ್ಲಿಯೂ ಇಲ್ಲವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

PM MODI

ಪಕ್ಷಕ್ಕೆ ಬಂದು ಜನರಿಂದ ಗೆದ್ದವರನ್ನು ಹಣ ಕೊಟ್ಟು ಖರೀದಿ ಮಾಡಿದ್ದು ಯಾವ ಪಕ್ಷ? ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದೆ ಅನ್ಯ ಪಕ್ಷಗಳಿಂದ ಶಾಸಕರನ್ನು ಸೆಳೆದವರು ಯಾರು? ನಿಮ್ಮ ಸರ್ಕಾರಗಳು ಹೇಗೆ ಬಂದವು ಎನ್ನುವುದನ್ನು ನೀವು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *