ಕೋಲಾರ: 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷವು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಭಾನುವಾರದೊಳಗೆ ತೀರ್ಮಾನ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೇಲ್ಮನೆ ಚುನಾವಣೆ ನಿಮಿತ್ತ ಕೋಲಾರ ಜಿಲ್ಲೆಯಲ್ಲಿ ಇಂದು ಪ್ರಚಾರ ಕೈಗೊಂಡಿದ್ದು, ಬೆಳಗ್ಗೆ ಮುಳಬಾಗಿಲಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ನಾಯಕರು ಬೆಂಬಲ ಕೇಳಿದ್ದಾರೆ ನಿಜ. ಎರಡು ದಿನದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಹೇಳುವುದಾಗಿ ನಾನು ಹೇಳಿರುವುದೂ ನಿಜ. ಇನ್ನೂ ಸಮಯ ಇದೆ, ಆತುರವೇನೂ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ ನಮ್ಮ ಪಕ್ಷದ್ದು. ಆ ಗೆಲುವಿಗೆ ಏನೆಲ್ಲ ಆಗಬೇಕೋ ಆ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ನಿರ್ದೇಶನವನ್ನು ನಾಳೆ ಅಥವಾ ನಾಡಿದ್ದರ ಒಳಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭಗವಂತ ಖೂಬಾರನ್ನು ಶ್ವಾನಕ್ಕೆ ಹೋಲಿಸಿದ ಈಶ್ವರ್ ಖಂಡ್ರೆ
Advertisement
Advertisement
ಬಿಜೆಪಿ ಒಂದು ಕಡೆ ಬೆಂಬಲ ಕೇಳುತ್ತಿದ್ದು, ಮತ್ತೊಂದು ಕಡೆ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶ ಮಾಡಬೇಕೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಇದೆಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 2023ಕ್ಕೆ ಜನತೆಯಿಂದಲೇ ಇದೆಲ್ಲದ್ದಕ್ಕೂ ಉತ್ತರ ದೊರೆಯಲಿದೆ ಎಂದು ತಿಳಿಸಿದರು.
Advertisement
ಚುನಾವಣೆಗಳನ್ನು ಹೇಗೆ ಗೆಲ್ಲಬೇಕು ಎಂಬುದು ಬಿಜೆಪಿಗೆ ಚೆನ್ನಾಗಿ ಕರಗತವಾಗಿದೆ. ಹಣದಿಂದ ಗೆಲುವು ಸಾಧಿಸುವುದು ಹೇಗೆ ಎಂಬುದು ಆ ಪಕ್ಷಕ್ಕೆ ಚೆನ್ನಾಗಿ ತಿಳಿದಿದೆ. ರಾಜ್ಯದ ಹಣ ಲೂಟಿ ಮಾಡಿ ಆ ಪಕ್ಷ ಚುನಾವಣೆಗಳನ್ನು ಗೆಲ್ಲುತ್ತಿದೆ. ಆ ವಿಷಯದಲ್ಲಿ ಆ ಪಕ್ಷದ ನಾಯಕರಿಗೆ ಒಳ್ಳೆಯ ಅನುಭವ ಇದ್ದು, ಅದರಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ. ಇಂಥ ಗೆಲುವು ನಿರಂತರವಾಗಿ ಎಲ್ಲ ಸಂದರ್ಭಗಳಲ್ಲೂ ಆಗುತ್ತದೆ ಎಂದು ಅವರು ನಂಬಿದ್ದಾರೆ. ಅದಕ್ಕೆ ವಿರುದ್ಧವಾಗಿ ಜನರು ತೀರ್ಮಾನ ತೆಗೆದುಕೊಳ್ಳುವ ಕಾಲ ಬಂದಿದೆ. ಹಣ ಬಲದ ವಿರುದ್ಧ ಒಂದಲ್ಲ ಒಂದು ದಿನ ಜನರು ತಿರುಗಿ ಬೀಳುತ್ತಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ 16 ಮಂದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಎಂಬ ಮಾಹಿತಿ ಇದೆ: ಹೆಚ್.ಕೆ.ಪಾಟೀಲ್
Advertisement
ಸಿದ್ದರಾಮಯ್ಯಗೆ ಪರೋಕ್ಷ ಚಾಟಿ
ಚಿಹ್ನೆಯ ಮೇಲೆ ಈ ಚುನಾವಣೆ ನಡೆಯಲ್ಲ. ಕೋಲಾರ-ಚಿಕ್ಕಬಳ್ಳಾಪುರ ಸೇರಿ ನಾವು ಸ್ಪರ್ಧೆ ಮಾಡುರುವ ಆರು ಕ್ಷೇತ್ರಗಳಲ್ಲಿಯೂ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ತ್ರಿಕೋನ ಸ್ಪರ್ಧೆ ಇದೆ. ಈ ಚುನಾವಣೆಯಲ್ಲಿ ಹಣಕ್ಕಿಂತ ಹೆಚ್ಚಾಗಿ ಸ್ಥಳೀಯವಾಗಿರುವ ರಾಜಕೀಯ ಬೆಳವಣಿಗೆಗಳು ಪ್ರಭಾವ ಬೀರಲಿವೆ. ಹೀಗಿದ್ದರೂ ಚುನಾವಣೆ ಎಂದ ಕೂಡಲೇ ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್ ಪಕ್ಷಕ್ಕೆ ಸರ್ಟಿಫಿಕೇಟ್ ಕೊಡಲು ಮುಂದಾಗುತ್ತಾರೆ. 2018ರಿಂದಲೂ ಅವರಿಂದ ಈ ರೀತಿಯ ಹೇಳಿಕೆಗಳು ಆರಂಭವಾಗಿದ್ದು, ಇದು 2023ರ ವಿಧಾನಸಭೆ ಚುನಾವಣೆವರೆಗೂ ಮುಂದುವರಿಯಲಿವೆ ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಓಮಿಕ್ರಾನ್ ನಿಯಂತ್ರಿಸಿ:
ರಾಜ್ಯದಲ್ಲಿ ಓಮಿಕ್ರಾನ್ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇನೆ. ನಿನ್ನೆಯೂ ಈ ಬಗ್ಗೆ ಮಾತನಾಡಿದ್ದೇನೆ. ಸರ್ಕಾರವೂ ಹಲವಾರು ಸಭೆಗಳನ್ನು ಮಾಡುತ್ತಿದೆ. ಕೇವಲ ಸಭೆ ಮಾಡಿದರೆ ಉಪಯೋಗವಿಲ್ಲ. ಎರಡನೇ ಅಲೆಯಲ್ಲಿ ಉಂಟಾದ ಪ್ರಾಣಹಾನಿ ಈ ಬಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಮುಕ್ತವಾಗಿ ಕೆಲಸ ಮಾಡಲು ವೈದ್ಯರಿಗೆ ಅವಕಾಶ ಕಲ್ಪಿಸಬೇಕು. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.