ಬೆಂಗಳೂರು: ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿಗಣತಿ ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಗೆ (Caste Census Report) ಅರ್ಥವೇ ಇಲ್ಲ. ಕಾಂತರಾಜು ಆಯೋಗದ ವರದಿ ಸಿದ್ಧ ಮಾಡಿ 10 ವರ್ಷಗಳೇ ಕಳೆದಿವೆ. ಜನರಲ್ಲಿ ಗ್ಯಾರಂಟಿ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆ ವಿರುದ್ಧ ಆಕ್ರೋಶ ಸ್ಫೋಟವಾಗುವ ಹಂತದಲ್ಲಿದೆ. ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಜಾತಿಗಣತಿ ಡ್ರಾಮಾ ನಡೆಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ
ಇವರು ಜಾತಿಗಣತಿ ಮಾಡಬೇಕಾದರೆ ಹೊಸದಾಗಿ ಸಮೀಕ್ಷೆ ಮಾಡಬೇಕು. ಹೊಸದಾಗಿ ವರದಿ ಕೊಡಬೇಕಾಗುತ್ತದೆ. 10 ವರ್ಷದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದರೆ ಇವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ-ಜಾತಿ ಮಧ್ಯ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾತಿಗಣತಿ ಶಿಫಾರಸು: ಓಬಿಸಿ, ಮುಸ್ಲಿಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಾ ಸರ್ಕಾರ?
ಸಿದ್ದರಾಮಯ್ಯ (Siddaramaiah) ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಜಾತಿ ಸಂಘರ್ಷಕ್ಕೆ ಏನೇನು ಮಾಡಬೇಕೋ ಅದಕ್ಕೆ ವೇದಿಕೆ ಸಿದ್ಧ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇವರು ಬಂದು 2 ವರ್ಷವಾಯಿತು. ಆವಾಗಿನಿಂದ ಯಾಕೆ ವರದಿ ಜಾರಿ ಮಾಡಲಿಲ್ಲ. ಕುರ್ಚಿ ಉಳಿಸಿಕೊಳ್ಳಬೇಕೆಂದು ಈ ಡ್ರಾಮಾ ಆರಂಭ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.