ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹೆಚ್.ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ಹೆಚ್.ಡಿ ಕುಮಾರಸ್ವಾಮಿ ದೆಹಲಿಯ ರಾಜ್‍ಘಾಟ್‍ನಲ್ಲಿರುವ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 3:30 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.
ಪ್ರಧಾನಿ ಭೇಟಿ ವೇಳೆ ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು, ಆಡಳಿತಾತ್ಮಕ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಿದ್ದಾರೆ.
ಪ್ರಧಾನಿ ಭೇಟಿ ಬಳಿಕ ಕೇಂದ್ರದ ರೈಲು ಹಾಗೂ ಇಂಧನ ಸಚಿವರನ್ನು ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಲಿದ್ದು, ರೈಲ್ವೆ ಯೋಜನೆಗಳು ಹಾಗೂ ಕಲ್ಲಿದ್ದಲು ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.