ತುಮಕೂರಿನಲ್ಲಿ ಬಾಣಂತಿ, ನವಜಾತ ಶಿಶುಗಳ ಮರಣ ಪ್ರಕರಣ – ಸಚಿವ ಸುಧಾಕರ್ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ

Public TV
3 Min Read
KUMARASWAMY

ಬೆಂಗಳೂರು: ತುಮಕೂರು (Tumakuru) ಜಿಲ್ಲಾ ಆಸ್ಪತ್ರೆ ವೈದ್ಯೆ ಮತ್ತು ಸಿಬ್ಬಂದಿಯ ಕ್ರೌರ್ಯಕ್ಕೆ ಬಲಿಯಾದ ಬಾಣಂತಿ, ಆಕೆಯ ಇಬ್ಬರು ನವಜಾತ ಶಿಶುಗಳ ದಾರುಣ ಸಾವು ವಿಚಾರದಲ್ಲಿ ಜನರ ದಾರಿ ತಪ್ಪಿಸಲೆತ್ನಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (K.Sudhakar) ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ಅವರು ಟೀಕಾಪ್ರಹಾರ ಮುಂದುವರಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಹೆಚ್‌ಡಿಕೆ, ಅಮಾನುಷ ಸಾವುಗಳನ್ನು ಪ್ರಶ್ನಿಸಿದ ತಮ್ಮ ವಿರುದ್ಧವೇ ಲಘುವಾಗಿ ಟ್ವೀಟ್ ಮಾಡಿರುವ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಸಚಿವ ಸ್ಥಾನಕ್ಕೆ ಸುಧಾಕರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನೈತಿಕತೆ ಇದ್ದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರ ರಾಜೀನಾಮೆ ಪಡೆಯಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಪಡಿಸಿದ್ದಾರೆ. ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ – ಪ್ರಸವದ ವೇಳೆ ಬಾಣಂತಿ, ಅವಳಿ ಶಿಶುಗಳು ಸಾವು

SUDHAKAR

ಟ್ವೀಟ್‌ನಲ್ಲೇನಿದೆ?
ಸಚಿವ ಸುಧಾಕರ್ ಅವರ ಮೇಲೆ ನೇರವಾಗಿಯೇ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿಗಳು, ಮಾನ್ಯ ಸುಧಾಕರ್ ಅವರೇ ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ಸಾವುಗೇಡಿ ಸರ್ಕಾರದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನ ಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ?

ಡಾ.ಸುಧಾಕರ್‌ ಅವರೇ ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ದಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ.

ತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ ಮತ್ತು ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ. ಇದನ್ನೂ ಓದಿ: ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

ಇಂಥ ದಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ? ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, ನಾಲ್ಕು ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ ಎರಡು ಕಂದಮ್ಮಗಳ ಮರಣ ನಿಮ್ಮ ಅಂತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ?

ನನ್ನ ಸರ್ಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ, ಇಲ್ಲಿ ನಡೆದದ್ದು ಕ್ರೌರ್ಯ. ಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್‌ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು. ಇದನ್ನೂ ಓದಿ: ಶಿಕ್ಷಕಿ ಹೊಡೆತದಿಂದ ವಿದ್ಯಾರ್ಥಿನಿ ಸಾವು ಪ್ರಕರಣ – ನಮಗೆ ಹಣ ಬೇಡ, ನ್ಯಾಯ ಬೇಕು: ವಿದ್ಯಾರ್ಥಿನಿ ಅಜ್ಜಿ

ಕಾಸಿಗಾಗಿ ಹುದ್ದೆ ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳ ಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ. ನಿಮ್ಮ ಪರ್ಸಂಟೇಜ್‌ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಒಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದಿರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲ ಸಚಿವರೇ.

ಸಚಿವರೇ ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ಅಂಥ ನೈತಿಕತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *