ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಊಹಾಪೋಹಗಳಿಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ನಾಯಕರೇ ನಿರ್ಧಾರ ಮಾಡಲು ಅಧಿಕಾರ ನೀಡಲಾಗಿದೆ. 2023ರ ಚುನಾವಣೆಗೆ ನಮ್ಮ ಪಕ್ಷಕ್ಕೆ ಅನುಕೂಲ ಆಗುವಂತೆ ನಿರ್ಧಾರ ಮಾಡಿ ಅಂತ ಹೇಳಿದ್ದೇನೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ. 2023ಕ್ಕೂ ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿ ಅಗತ್ಯವಿಲ್ಲ: ಶ್ರೀನಿವಾಸ್ ಪ್ರಸಾದ್
Advertisement
Advertisement
ಚುನಾವಣೆ ಪ್ರಚಾರದ ಅಂತ್ಯಕ್ಕೆ ಬಂದದ್ದೇವೆ. ಪರಿಷತ್ ಚುನಾವಣೆಗೆ ಜೆಡಿಎಸ್ ನಿಲುವಿನ ಬಗ್ಗೆ ಕುತೂಹಲ ಇದೆ. ಕಳೆದ ಒಂದು ವಾರದಿಂದ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಅಂತ ಊಹಾಪೋಹ, ಕಪೋಲಕಲ್ಪಿತ ಸುದ್ದಿ ಬಂದಿವೆ. ಕಾಂಗ್ರೆಸ್ ನಾಯಕರು ಚುನಾವಣೆ ಸಮಯದಲ್ಲಿ ಬಿಜೆಪಿ ʼಬಿʼ ಟೀಂ ಅಂತ ರಾಜಕೀಯ ಮಂತ್ರ ಪಠಣ ಮಾಡುತ್ತಿದ್ದಾರೆ. ದೇವರ ಮುಂದೆ ಜನ ಬೇರೆ ಮಂತ್ರ ಹೇಳುತ್ತಾರೆ. ಕಾಂಗ್ರೆಸ್ಸಿನವರು ಜೆಡಿಎಸ್ ʼಬಿʼ ಟೀಂ ಮತ್ತು ಕುಟುಂಬದ ಪಕ್ಷ ಅಂತ ಹೇಳುತ್ತಾರೆ. ಜೆಡಿಎಸ್ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಉಳಿದ ಕಡೆ ಬಿಜೆಪಿ ಜೊತೆ ಹೋಗಿ ಕಾಂಗ್ರೆಸ್ ಸೋಲಿಸುತ್ತದೆ ಅಂತ ಚರ್ಚೆ ಆಗುತ್ತಿದೆ. ಕಾಂಗ್ರೆಸ್ಸಿನವರು ಜೆಡಿಎಸ್ ಬೆಂಬಲ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ. ಜೆಡಿಎಸ್ ಧೂಳಿಪಟ ಆಗುತ್ತೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯಾಗಲಿ ನಮ್ಮ ಬೆಂಬಲ ಕೇಳಿಲ್ಲ ಎಂದು ಹೇಳಿದ್ದಾರೆ.
Advertisement
ಯಡಿಯೂರಪ್ಪ ಅವರು 2-3 ಬಾರಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡಿ ಅಂತ ಮನವಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ ಅಂತ ಹೇಳಿದ್ದಾರೆ. ಮಂಡ್ಯದಲ್ಲಿ ಮತ್ತೆ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ-ಜೆಡಿಎಸ್ ಮೈತ್ರಿ ಅಲ್ಲ. ನಮಗೆ ಬೆಂಬಲ ಕೊಡಿ ಅಂತ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ನಾವು ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಇದೆ. ಇಲ್ಲಿ ಯಾರ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಎರಡು ರಾಷ್ಟ್ರೀಯ ಪಕ್ಷದ ಜೊತೆ ಹೋರಾಟ ಮಾಡುತ್ತಿದ್ದೇವೆ. ಅನೇಕ ಜಿಲ್ಲೆಯಲ್ಲಿ ನಮ್ಮ ಮತಗಳೇ ನಿರ್ಣಾಯಕ. ಇವತ್ತಿನ ಆರ್ಥಿಕ ವ್ಯವಸ್ಥೆ ಚುನಾವಣೆ ಹಿನ್ನೆಲೆ 6 ಕ್ಷೇತ್ರದಲ್ಲಿ ಮಾತ್ರ ನಾವು ಸ್ಪರ್ಧೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ: ಸಿಟಿ ರವಿ
Advertisement
6 ಕ್ಷೇತ್ರ ಬಿಟ್ಟು ಉಳಿದ ಕಡೆ ಏನು ಮಾಡಬಹುದು ಅಂತ ಚರ್ಚೆ ಆಗುತ್ತಿದೆ. ನಮ್ಮ ಸ್ಥಳೀಯ ನಾಯಕರ ಜೊತೆ 2-3 ಸುತ್ತಿನ ಸಮಾಲೋಚನೆ ಮಾಡಿದ್ದೇನೆ. ಅವರ ಅಭಿಪ್ರಾಯ ಪಡೆದಿದ್ದೇವೆ. ನಮ್ಮ ಗುರಿ ಇರುವುದು 2023 ಚುನಾವಣೆ. 150 ಗುರಿ ಮುಟ್ಟೋದು ನಮ್ಮ ಕೆಲಸ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಕೂಡಾ ನನ್ನ ಜೊತೆ ಕರೆ ಮಾಡಿ ಮಾತಾಡಿದ್ದಾರೆ. ಅದು ಅವರ ರಾಜಕೀಯ ಮುತ್ಸದ್ಧಿತನ ತೋರುತ್ತದೆ. ಅದರ ಬಗ್ಗೆ ನಾನು ಹಗುರವಾಗಿ ನಾನು ಮಾತಾನಾಡುವುದಿಲ್ಲ. ಆದರೆ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲ ಕಡೆ ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕು. ಹೀಗಾಗಿ ಈ ನಿರ್ಧಾರ ಮಾಡಿದ್ದೇವೆ. ನಮ್ಮ ಅಭ್ಯರ್ಥಿಗೆ ಹಿನ್ನಡೆ ಆಗದಂತೆ ಈ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ
ರಾಜ್ಯ ಮಟ್ಟದ ಪರಿಸ್ಥಿತಿ ಬೇರೆ, ಸ್ಥಳೀಯ ಮಟ್ಟದ ಪರಿಸ್ಥಿತಿ ಬೇರೆ. 2023ಕ್ಕೆ ನಿಮಗೆ ಈ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಬೇರೆ ಪಕ್ಷದ ರಾಜ್ಯ ನಾಯಕರಲ್ಲಿ ಅನೇಕ ಗೊಂದಲಗಳಿವೆ. ಈ ನಿರ್ಧಾರದಿಂದ ಜೆಡಿಎಸ್‌ಗೆ ಏನು ಲಾಭ ಅಂತ 2023ಕ್ಕೆ ಗೊತ್ತಾಗುತ್ತದೆ ಎಂದು ಮಾತನಾಡಿದ್ದಾರೆ.