Connect with us

Bengaluru City

ನಾನು ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅಂದ್ರು ದೇವೇಗೌಡ್ರು

Published

on

ಬೆಂಗಳೂರು: ದೇಶದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ನಿರ್ಮಾಣವಾಗಿರುವ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಬಗ್ಗೆ ಪ್ರತಿಕ್ರಿಯಿಸುತ್ತ ನಾನು ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅಂತ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹೇಳಿದ್ದಾರೆ.

`ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ದೇಶದೆಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಈ ಚಿತ್ರದ ಕುರಿತು ರಾಜಕೀಯ ವಲಯದಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿದೆ. ಶನಿವಾರ ಸಿಎಂ ಕುಮಾರಸ್ವಾಮಿಯನ್ನು ರಾಜ್ಯ ಬಿಜೆಪಿ ಪಕ್ಷದವರು ಆಕ್ಸಿಡೆಂಟಲ್ ಸಿಎಂ ಎಂದು ವ್ಯಂಗ್ಯವಾಡಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಚಿತ್ರ ನಿರ್ಮಾಣ ಮಾಡಲು ಯಾಕೆ ಅವಕಾಶ ಕೊಟ್ಟರೋ ಗೊತ್ತಿಲ್ಲ. ಬಹುಶಃ ಈ ಚಿತ್ರ ಸುಮಾರು ನಾಲ್ಕೈದು ತಿಂಗಳ ಹಿಂದಿನಿಂದ ಸಿದ್ಧವಾಗುತ್ತಿರಬಹುದು. ನಾನು ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ, ನಾನೂ ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ದೇವೇಗೌಡರು ಹೇಳಿದರು.

1996ರ ಲೋಕಸಭೆ ಚುನಾವಣೆ ಫಲಿತಾಂಶ ಬಂದಾಗ ದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಸಂಯುಕ್ತ ರಂಗವು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ನಿರ್ಧರಿಸಿತು. ಆಗ ಸಂಯುಕ್ತ ರಂಗದ ನೇತೃತ್ವವನ್ನು ವಹಿಸಿಕೊಂಡ ದೇವೆಗೌಡರು ಪ್ರಧಾನಿ ಆಗಿದ್ದರು. 1996ರ ಜೂನ್ 1 ರಿಂದ, 1997ರ ಏಪ್ರಿಲ್ 21ರ ವರೆಗೆ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಇದನ್ನೂ ಓದಿ: ಎಚ್ಡಿಕೆ ‘ಆಕ್ಸಿಡೆಂಟಲ್ ಸಿಎಂ’ ಸಿನಿಮಾದ ಹೀರೋ ಯಾರು? ಬಿಜೆಪಿ ಟ್ವೀಟ್

ಸದ್ಯ ದೇಶದಲ್ಲಿ ಚರ್ಚೆಗೆ ಗುರಿಯಾಗಿರುವ `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ, ಅದೇ ಹೆಸರಿನ ಕೃತಿ ಆಧಾರಿತವಾಗಿದೆ. 2004ರಿಂದ 2008ರ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಈ ಕೃತಿ ಬರೆದಿದ್ದರು. ಈ ಕೃತಿಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಅವರು ಚಿತ್ರ ಮಾಡಿ ಮುಗಿಸಿದ್ದಾರೆ. 2019ರ ಜ.11 ರಂದು ಸಿನಿಮಾ ತೆರೆ ಕಾಣಲಿದ್ದು, ಸದ್ಯ ಅದರ ಟ್ರೇಲರ್ ಮೂಲಕವೇ ದೇಶದಲ್ಲಿ ಸದ್ದು ಮಾಡುತ್ತಿದೆ. ಗುರುವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಕಾಂಗ್ರೆಸ್‍ನ ಒಳ ರಾಜಕೀಯಕ್ಕೆ ಮನಮೋಹನ್ ಸಿಂಗ್ ಬಲಿಪಶು ಆಗಿದ್ದರು ಎಂಬ ಅರ್ಥವನ್ನು ಹೋಲುವ ದೃಶ್ಯಗಳಿವೆ ಎನ್ನುವ ಆರೋಪಗಳು ಕೇಳಿಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *