ನವದೆಹಲಿ: ವಕ್ಫ್ ಬೋರ್ಡ್ನ (Waqf Board) ಆಸ್ತಿ 1.2 ಲಕ್ಷ ಕೋಟಿ ರೂ. ಬೆಲೆ ಬಾಳುತ್ತದೆ. ಈ ಆಸ್ತಿಯನ್ನು ದಾನಿಗಳು ನೀಡಿದ್ದು, ಇದು ದುರ್ಬಳಕೆ ಆಗದಂತೆ ಪ್ರಧಾನಿ ಮೋದಿಯವರು (Narendra Modi) ತಡೆಯಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H.D Devegowda) ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಗೆ (Waqf Amendment Bill) ಬೆಂಬಲಿಸಿ ಅವರು ಮಾತನಾಡಿದರು. ಈ ವೇಳೆ, ದಾನದ ಆಸ್ತಿ ಉಳ್ಳವರ ಪಾಲಾಗದಂತೆ ಕಾಪಾಡಲು ಪ್ರಧಾನಿ ಮುಂದಾಗಿದ್ದಾರೆ. ಈ ಆಸ್ತಿಯನ್ನು ಸರ್ಕಾರ ನೀಡಿಲ್ಲ. ದಾನಿಗಳು ನೀಡಿದ ದಾನ ದುರ್ಬಳಕೆಯಾಗಬಾರದು ಎಂದಿದ್ದಾರೆ.
ದೇವರನ್ನು ನನ್ನ ಸ್ನೇಹಿತ ಅಲ್ಹಾ ಅಂತಾರೆ, ನಾನು ರಾಮ ಎನ್ನುತ್ತೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿವನು. ತಿರುಪತಿ, ಅಜ್ಮೀರ್ ದರ್ಗಾ, ಗೊಲ್ಡನ್ ಟೆಂಪಲ್ಗೆ ಹೋಗುತ್ತೇನೆ. ಜೀವನದಲ್ಲಿ ಕೆಲವು ಸಿದ್ಧಾಂತ ಇಟ್ಟುಕೊಂಡಿದ್ದೇನೆ. ವಕ್ಫ್ ಮಸೂದೆ ಮತ್ತು ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲೂ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ
ಕರ್ನಾಟಕದಲ್ಲಿ ಉಪ ಲೋಕಾಯುಕ್ತ ಜಸ್ಟಿಸ್ ಆನಂದ್ ಅವರು ವರದಿ ನೀಡಿದ್ದಾರೆ. ನಾನು ಸಿಎಂ ಅಥವಾ ಯಾವುದೇ ನಾಯಕರ ಹೆಸರು ಉಲ್ಲೇಖಿಸಲ್ಲ. ವರದಿ ಮಾರಾಟ ಮಾಡಲಾಯಿತು, ಇದು ಬೆಳಕಿಗೆ ಬರಲಿಲ್ಲ. ಇಂದು ಅವರು ಆಡಳಿತ ನಡೆಸುತ್ತಿದ್ದಾರೆ. ಇಂದು ಅವರು ಸಹ ಇಲ್ಲಿ ಮಾತನಾಡಿದರು ಎಂದು ಪರೋಕ್ಷವಾಗಿ ಖರ್ಗೆಯವರಿಗೆ ಕುಟುಕಿದರು.
ನಾನು ಸಿಎಂ ಆಗಿ ಅಲ್ಪ ಸಂಖ್ಯಾತರ ರಕ್ಷಣೆಗೆ ಸಾಕಷ್ಟು ನಿರ್ಧಾರ ಮಾಡಿದ್ದೇನೆ. ನಾನು ಯಾವುದೇ ಸಿದ್ಧಾಂತದವನಲ್ಲ, ನಾನು ರೈತ. ಮುಸ್ಲಿಂ ಮಾತ್ರವಲ್ಲ ಬಹಳಷ್ಟು ಸಮುದಾಯಕ್ಕೆ ಮೀಸಲಾತಿ ನೀಡಿದ್ದೇನೆ. ನಾನು ಸ್ಪೀಕರ್ ಆಸನಕ್ಕೆ ಎಂದೂ ಅವಮಾನ ನೋಡಿಲ್ಲ. ಇಂದು ನೋಡಿ ಬೇಸರವಾಗುತ್ತಿದೆ. ಕರ್ನಾಟಕದಲ್ಲಿ ಏನಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ: ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?