ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಪ್ರವಾಹದಿಂದ ಆಗಿರೋ ಅನಾಹುತಕ್ಕೆ ಅವಶ್ಯಕತೆ ಬಿದ್ದರೆ ನಾನೇ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ, ಪರಿಹಾರಕ್ಕೆ ಮನವಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ (H D Deve Gowda) ತಿಳಿಸಿದ್ದಾರೆ.
ಪ್ರವಾಹ (Flood) ವಿಚಾರ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಮೊನ್ನೆ ನೆರೆ ಹಾನಿ ಪ್ರದೇಶಗಳ ವೈಮಾನಿಕ ಸರ್ವೆ ಮಾಡಿದ್ದಾರೆ. ನಾನು ಅವರು ಮಾಡಿದ ಸರ್ವೆ ನೋಡಿದೆ. ನಾನು ಸಿಎಂ ಮೇಲೆ ಆಪಾದನೆ ಮಾಡೊಲ್ಲ. ವೈಮಾನಿಕ ಸರ್ವೆ ಮಾಡಿ 3 ದಿನ ಆಗಿದೆ. 6 ಜಿಲ್ಲೆಯಲ್ಲಿ ಬೆಳೆ ನಾಶ ಆಗಿದೆ. 50ಕ್ಕೂ ಹೆಚ್ಚು ಜನರು, ಜಾನುವಾರುಗಳು ಸತ್ತು ಹೋಗಿವೆ. ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಅವ್ರು ಎಕ್ರೆಗೆ ಇಷ್ಟು ಹಣ ಅಂತ ಘೋಷಣೆ ಮಾಡಿದ್ರು. ಆದರೆ ಫೀಲ್ಡ್ಗೆ ಹೋಗಿ ಎಷ್ಟು ಪ್ರದೇಶ ಹಾನಿಯಾಗಿದೆ ಅಂತ ನೋಡಿ ಸಂಬಂಧಪಟ್ಟವರ ನೋವಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಆಡಳಿತವೂ ಮಾಡಿಲ್ಲ. ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ತಿಂಗಳು ನನ್ನ ಮನೆಮುಂದೆ ಮಾಧ್ಯಮಗಳು ಕಾಯೋ ಹಾಗೇ ಮಾಡಿದ್ದು ಯಾರ ಪ್ರೇರಣೆಯಿಂದ – HDD ಕಿಡಿ
48 ಗಂಟೆ ಒಳಗೆ ಡಿಸಿಗಳು, ಜಿಲ್ಲಾ ಉಸ್ತುವಾರಿಗಳು ಜಾಗಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು. ನೋವಿನಲ್ಲಿ ಇರೋ ರೈತರಿಗೆ ಪರಿಹಾರ ಕೊಟ್ಟಿದ್ದಾರಾ ಇಲ್ವಾ ಅಂತ ನೋಡಿ ಮಾತಾಡಬೇಕು. ಮೂರ್ನಾಲ್ಕು ದಿನ ಆದ ಮೇಲೆ ಕಲಬುರಗಿಗೆ ವಿಮಾನದಲ್ಲಿ ಬಂದಿದ್ದಾರೆ. ನಾನೇ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗ್ತೀನಿ. ಸ್ಥಳ ಪರಿಶೀಲನೆ ಮಾಡಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮಾತಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ
ಈಗಾಗಲೇ ಪರಿಹಾರ ಕೊಡಿ ಅಂತ ಪ್ರಧಾನಿ ಮೋದಿ, ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ಅವಶ್ಯಕತೆ ಬಿದ್ದರೆ ಮೋದಿ, ಅಮಿತ್ ಶಾಗೆ ಪತ್ರ ಬರೆಯುತ್ತೇನೆ. ನಾನೇ ದೆಹಲಿಗೆ ಹೋಗಿ ಪ್ರಧಾನಿ ಅವರ ಬಳಿ ಪರಿಹಾರಕ್ಕಾಗಿ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.
ಬೇರೆ ರಾಜ್ಯದ ಪ್ರವಾಹಕ್ಕೆ ಕೇಂದ್ರ ಹಣ ಕೊಟ್ಟಿದೆ. ಕರ್ನಾಟಕಕ್ಕೆ ಕೊಟ್ಟಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪದ ಪ್ರತಿಕ್ರಿಯಿಸಿದ ಅವರು, ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗಲ್ಲ. ಕಾಂಗ್ರೆಸ್‌ನ ಶಾಸಕರು ಗ್ಯಾರಂಟಿ ಕಾರ್ಯಕ್ರಮವನ್ನ ಅನುಷ್ಠಾನಕ್ಕೆ ತರಲು ಹೋಗಿ, ಇವತ್ತು ರಾಜ್ಯ ಬರಡಾಗಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಅಂತ ಹೇಳ್ತಿದ್ದಾರೆ. ಇದನ್ನ ನಾನು ಹೇಳ್ತಿಲ್ಲ. ಕಾಂಗ್ರೆಸ್ ಶಾಸಕರು ಹೇಳ್ತಿದ್ದಾರೆ. ರಾಜ್ಯದ ಬೊಕ್ಕಸದಲ್ಲಿ ದುಡ್ಡು ಇದೆಯೋ? ಇಲ್ಲವೋ ಅಂತ ಅವರಲ್ಲೇ ಗೊಂದಲವಿದೆ. ರಾಜ್ಯ ಸರ್ಕಾರ ಪ್ರವಾಹದಿಂದ ಸಮಸ್ಯೆಗೊಳಗಾದ ಜನರಿಗೆ ತನ್ನ ಸಂಪನ್ಮೂಲದಿಂದ ಶಕ್ತಿ ಮೀರಿ ಸಹಾಯ ಮಾಡಬೇಕು ಎಂದಿದ್ದಾರೆ.