ಹಾಸನ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಲೋಕೋಪಯೋಗಿ ಸಚಿವ ಹೆಚ್. ರೇವಣ್ಣರಿಗೆ ಎಲ್ಲರ ಮುಂದೆ ಕ್ಲಾಸ್ ತೆಗೆದುಕೊಂಡು ಸಭಾಂಗಣದ ಹೊರಗೆ ಹೋಗಿ ಮಾತನಾಡು ಎಂದು ಗದರಿದ್ದಾರೆ.
ಸಭಾಂಗಣದ ಒಳಗಡೆ ಉಸ್ತುವಾರಿ ಸಚಿವ ರೇವಣ್ಣ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದಾಗ, ಸಭಾಂಗಣದ ಬಾಗಿಲ ಬಳಿ ನಿಂತು ಅಧಿಕಾರಿಗಳೊಂದಿಗೆ ರೇವಣ್ಣ ಚರ್ಚೆ ಮಾಡುತ್ತಿದ್ದರು.
Advertisement
Advertisement
ಇದನ್ನು ನೋಡಿ ದೇವೇಗೌಡರು ಗರಂ ಆಗಿ “ಏ ರೇವಣ್ಣ ನಿಮ್ಮ ವಿಷಯ ಇದ್ದರೆ ಅಚೆ ಹೋಗಿ ಮಾತನಾಡು, ಇಲ್ಲಿ ಮಾಧ್ಯಮದವರಿದ್ದಾರೆ” ಎಂದು ಗದರಿದ್ದಾರೆ. ತಂದೆ ಎಚ್‍ಡಿಡಿ ಗದರಿದ ತಕ್ಷಣ ತರಾತುರಿಯಲ್ಲಿ ಹಾಲ್ ಬಿಟ್ಟು ಸಚಿವ ರೇವಣ್ಣ ಹೊರ ನಡೆದಿದ್ದಾರೆ.
Advertisement
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್‍ಡಿಡಿ, ಕೇಂದ್ರ ಸರ್ಕಾರದ ಜನಪ್ರಿಯತೆ ಕುಸಿಯುತ್ತಿದೆ. ಈ ಕಾರಣಕ್ಕೆ ಮೇಲ್ವರ್ಗದವರಿಗೆ ಮೀಸಲಾತಿ ಅಸ್ತ್ರವನ್ನು ಬಳಸಿದ್ದಾರೆ. ಚುನಾವಣಾ ದೃಷ್ಟಿಯಿಂದ ಹೀಗೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮರುಮಾತನಾಡದೇ ಎಲ್ಲ ಪಕ್ಷದವರು ಬೆಂಬಲಿಸಿದ್ದಾರೆ. ನಮ್ಮ ಪಕ್ಷದ ವತಿಯಿಂದ ಬ್ರಾಹ್ಮಣ ಸಮುದಾಯಕ್ಕೆ ಏನು ನೀಡಬೇಕು ಅದನ್ನು ನೀಡಿದ್ದೇವೆ. ಸದ್ಯ ಈ ವಿಚಾರ ಸುಪ್ರಿಂ ಕೋರ್ಟ್ ನಲ್ಲಿದೆ ಏನಾಗುತ್ತೆ ನೋಡೋಣ ಎಂದು ಪ್ರತಿಕ್ರಿಯಿಸಿದರು.
Advertisement
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗಿನ ಮೈತ್ರಿಯನ್ನು ಸ್ಪಷ್ಟಪಡಿಸಿದ ಗೌಡರು, ನಮ್ಮ ಪಕ್ಷಕ್ಕೆ ಎಷ್ಟು ಸೀಟು ಕೊಡುತ್ತಾರೆ ಗೊತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲಾಗುವುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಕುರಿತು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv