ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕಳೆದ ಎಂಟು ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಓಡಾಡುತ್ತಿದ್ದಾನೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನ ಅವರಿಗೆ ಬಿಟ್ಟುಕೊಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಪ್ರಾದೇಶಿಕ ಪಕ್ಷದ ಉಳಿವು:
ಉಳಿದಂತೆ 2019ರ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಪ್ರಕ್ರಿಯೆ ಕಾರ್ಯದ ಚರ್ಚೆಯಾಗಬೇಕಿದೆ. ಯಾವ ಸೀಟು ಯಾರಿಗೆ ಹೋಗುತ್ತೋ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಏಳೆಂಟು ಜಿಲ್ಲೆಗಳಿಗೆ ನಾವು ಪ್ರವಾಸ ಮಾಡುತ್ತೇವೆ. ಮಾರ್ಚ್ ಮೊದಲ ವಾರದಲ್ಲಿ ಪ್ರವಾಸ ಮಾಡುತ್ತೇವೆ. ಮೈತ್ರಿ ಸರ್ಕಾರ ಮಾಡಿದ್ದೇವೆ ಅಂತ ಎಂದು ಸಲಿಗೆ ನೀಡಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಉಳಿವು ಮುಖ್ಯವಾಗಿದ್ದು, ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿ ಊಹಾಪೋಹಗಳಿಗೆ ತೆರೆ ಎಳೆಯಬೇಕಿದೆ ಎಂದು ಹೇಳಿದರು.
Advertisement
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವಿದ್ದು, 2016 ರಲ್ಲಿ ಧರಂ ಸಿಂಗ್ ನೇತೃತ್ವದಲ್ಲಿ ಮೈತ್ರಿಯಾಗಿತ್ತು, ಈಗ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಏಳು ತಿಂಗಳಾಗಿದೆ. ಆದರೆ ನಿಗಮ ಮಂಡಳಿಗಳ ಬಗ್ಗೆ ಇನ್ನು ಅಂತಿಮವಾಗಿಲ್ಲ. ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ನಂತರ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಬೇಕಿದೆ. ಬಳಿಕ 3:1 ಭಾಗದ ಸ್ಥಾನ ನಾವು ತುಂಬುತ್ತೇವೆ. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷದಿಂದ ನೇಮಕಾತಿ ನಡೆಯುತ್ತೆ. ಜ. 3 ರಂದು ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ಕರೆದಿದ್ದೇವೆ ಎಂದು ತಿಳಿಸಿದರು.
Advertisement
ಶಾಸಕ ಸುಧಾಕರ್ ಗೆ ಪರೋಕ್ಷ ಟಾಂಗ್:
ಇದೇ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಮಾಡಲು ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಇದೆ. ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಅನಾವಶ್ಯಕ ಚರ್ಚೆ ಬೇಡ, ಅಲ್ಲದೇ ಅನಗತ್ಯ ಹೇಳಿಕೆಗಳನ್ನು ನೀಡುವುದು ಬೇಡ. ಈ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಶಾಸಕ ಡಾ. ಸುಧಾಕರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಚಾರಕ್ಕೆ ಬದ್ಧವಾಗಿದ್ದು, ಸಾಲಮನ್ನಾ ಬಗ್ಗೆ ಅನುಮಾನ ಬೇಡ. ಆದರೆ ಶೆಡ್ಯೂಲ್ ಬ್ಯಾಂಕುಗಳು ಸಾಲಮನ್ನಾ ವಿಚಾರದಲ್ಲಿ ಸಹಕರಿಸುತ್ತಿಲ್ಲ. ಅಲ್ಲದೇ ಸಹಕಾರಿ ಬ್ಯಾಂಕ್ ಸಾಲ ಮನ್ನಾ ಆಗಲಿದೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಷ್ಟ್ರೀಕೃತ ಬ್ಯಾಂಕು ಸಾಲಮನ್ನಾ ಬಗ್ಗೆಯೂ ಸಂಶಯಬೇಡ ಎಂದು ಆಶ್ವಾಸನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv