ಹಾಸನ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H.D Deve Gowda) ಇತ್ತೀಚೆಗೆ ನಿಧನರಾದ ಸಹೋದರಿ ಜವರಮ್ಮ ಅವರ ಪುಣ್ಯಾರಾಧನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ.
ಹೆಲಿಕಾಪ್ಟರ್ ಮೂಲಕ ಹುಟ್ಟೂರು ಹರದನಹಳ್ಳಿಗೆ ಅವರು ಆಗಮಿಸಿದ್ದರು. ಬಳಿಕ ಬಸವನಾಯಕನಹಳ್ಳಿಯ ಸಹೋದರಿ ಮನೆಗೆ ತೆರಳಿದರು. ಅಲ್ಲಿ ತಂಗಿಯ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ನಮ್ಮ ತಂದೆಯ ಎರಡನೇ ಪತ್ನಿಯ ಮೊದಲ ಮಗ ನಾನು. ಜವರಮ್ಮ ನನಗೆ ಎರಡನೇ ತಂಗಿ, ನನಗಿಂತ ಮೂರು ವರ್ಷ ಚಿಕ್ಕವಳು ಎಂದರು. ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರ ಸಹೋದರಿ ನಿಧನ
ತಂಗಿ ನಿಧನಕ್ಕೆ ಪ್ರಧಾನಿಯವರು ಸಂತಾಪದ ಮೆಸೇಜ್ ಕಳಿಸಿದ್ದರು. ಸಾಮಾನ್ಯ ಕುಟುಂಬದ ಒಬ್ಬ ಹಳ್ಳಿಯ ಹೆಣ್ಣು ಮಗಳ ಬಗ್ಗೆ ಗೌರವದಿಂದ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಅವರಿಗೆ ನಮ್ಮ ಕುಟುಂಬದ ಪರವಾಗಿ ನಾನು ಆಭಾರಿ ಆಗಿದ್ದೇನೆ. ಅವರ ಭಾವನೆಯನ್ನು ಜೀವನದಲ್ಲಿ ಮರೆಯೋದಿಲ್ಲ ಎಂದರು. ಇದೇ ವೇಳೆ ಮೂರು ದಿನ ಪಾರ್ಲಿಮೆಂಟ್ ಇದೆ. ಮತ್ತೆ ಬಂದು ರಾಜಕೀಯದ ಬಗ್ಗೆ ಮಾತಾಡುತ್ತೇನೆ ಎಂದು ತೆರಳಿದರು.
ಮಾ. 19 ರಂದು ವಯೋಸಹಜ ಕಾಯಿಲೆಯಿಂದ ಜವರಮ್ಮ ನಿಧನರಾಗಿದ್ದರು. ದೆಹಲಿಯಲ್ಲಿದ್ದಿದ್ದರಿಂದ ಗೌಡರು ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಇಂದು ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹೆಚ್.ಡಿ.ರೇವಣ್ಣ ಸಹ ಹಾಜರಿದ್ದರು. ಇದನ್ನೂ ಓದಿ: ಹಾಸನ ಡಿಸಿ, ಹೊಳೆನರಸೀಪುರ ತಾ.ಪಂ. ಇಓ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಹೆಚ್.ಡಿ.ರೇವಣ್ಣ

