Chitradurga

ಭಾರತಕ್ಕೆ ಸ್ವಾತಂತ್ರ್ಯ ತಂದ ಕಾಂಗ್ರೆಸ್ ಜನಮಾನಸದಲ್ಲಿ ಬೇರೂರಿದೆ: ಎಚ್.ಆಂಜನೇಯ

Published

on

Share this

ಚಿತ್ರದುರ್ಗ: ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಿಗೊಳಿಸಿದ ಕಾಂಗ್ರೆಸ್ ಪಕ್ಷ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು, ಮುತ್ತಗದೂರು, ಬಿ.ದುರ್ಗ, ಗುಂಜಿಗನೂರು ಗ್ರಾಮಗಳಲ್ಲಿ ಇಂದು ನಡೆದ ಕಾಂಗ್ರೆಸ್ ಗ್ರಾಮ ಪಂಚಾಯತಿ ಸಮಿತಿ ರಚನಾ ಸಭೆಯಲ್ಲಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ) ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ 70 ವರ್ಷ ಆಡಳಿತ ನಡೆಸಲು ಜನರು ಅವಕಾಶ ನೀಡಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಡಾ.ಮನಮೋಹನ್ ಸಿಂಗ್ ಹೀಗೆ ಅನೇಕ ಮಹನೀಯರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದರು.

ಕಾಂಗ್ರೆಸ್ ದೇಶಕ್ಕೆ ಹಿತ ಎಂಬ ಬಿರುದನ್ನು ಜನರಿಂದ ಪಡೆದ ಏಕೈಕ ಪಕ್ಷ, ಇದು ನಮ್ಮೆಲ್ಲರ ಹೆಗ್ಗಳಿಕೆ. ಪ್ರಸ್ತುತ ದೇಶ, ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಧನ ಬೆಲೆ 100 ರೂಪಾಯಿ ದಾಟಿದ್ದು, ಸಿಲಿಂಡರ್ ಬೆಲೆ ಸಾವಿರ ರೂ. ದಾಟುವ ಸಮೀಪದಲ್ಲಿದೆ. ಈಗಾಗಲೇ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಉದ್ಯೋಗ ಕಳೆದುಕೊಂಡ ಲಕ್ಷಾಂತರ ಜನ ಹಳ್ಳಿ ಸೇರಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

ಕೋವಿಡ್ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲಗೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಸಂಷ್ಟಕ್ಕೆ ಸಿಲುಕಿದ ಜನರ ಆಸರೆಗೆ ಬಂದಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಮತ್ತು ಅನ್ನಭಾಗ್ಯ ಯೋಜನೆ ಎಂಬುದು ಜಗಜ್ಜಾಹೀರು. ಆದರೂ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಇವರ ಸಮಸ್ಯೆಗೆ ಸ್ಪಂದಿಸುವ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಪ್ರತಿ ಕಾರ್ಯಕರ್ತನದ್ದಾಗಿದೆ. ಈ ಕಾರಣಕ್ಕೆ ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಕರೆ ನೀಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷದ ನಿಜವಾದ ಆಸ್ತಿ ಆಗಿರುವ ಕಾರ್ಯಕರ್ತರು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ, ಸಮಿತಿ ರಚಿಸುವ ಮಹತ್ತರ ಕಾರ್ಯ ಕೈಗೊಳ್ಳಲಾಗಿದೆ. ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಬೆಳವಣಿಗೆಗೆ ಇದೊಂದು ಭದ್ರ ಬುನಾದಿ ಆಗಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಅಂದನೂರು, ಮುತ್ತಗದೂರು, ಬಿ.ದುರ್ಗ, ಗುಂಜಿಗನೂರು ಗ್ರಾಮಗಳಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ) ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಸದಸ್ಯರನ್ನು ನೇಮಿಸಲಾಯಿತು. ಸಭೆಯಲ್ಲಿ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರುಗೇಶ್ ಪೂಜಾರಿ, ಜಿಪಂ ಮಾಜಿ ಸದಸ್ಯ ಲೋಹಿತ್ ಕುಮಾರ್, ಅಂದನೂರು ಗ್ರಾಮಪಂಚಾಯತಿ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಮುಖಂಡರಾದ ರಂಗಸ್ವಾಮಿ, ಓಂಕಾರಸ್ವಾಮಿ, ರುದ್ರಣ್ಣ, ಲಿಂಗರಾಜು, ಬಸಣ್ಣ, ರಮೇಶ್, ಖಲಂಧರ್, ಮರಳುಸಿದ್ದಪ್ಪ, ಲೋಕೇಶ್, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications