ಆನೇಕಲ್: ಜಿಮ್‌ಗೆ (Gym) ನುಗ್ಗಿ ಟ್ರೈನರ್ ಮೇಲೆ ಐವರು ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ (Anekal) ಬಳಿ ಸೆ.23 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆನೇಕಲ್ ಪಟ್ಟಣ ನಿವಾಸಿ ಸಂದೀಪ್ ಹಲ್ಲೆಗೊಳಗಾದ ಜಿಮ್ ಟ್ರೈನರ್. ಅರುಣ್, ಗೌತಮ್, ಅನುಷಾ, ಮೇಘನಾ ಸೇರಿದಂತೆ ಇತರರು ಹಲ್ಲೆ ಮಾಡಿದ ಆರೋಪಿಗಳು ಎನ್ನಲಾಗಿದೆ. ಇದನ್ನೂ ಓದಿ: ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು
ಸಂದೀಪ್, ಹೆಬ್ಬಗೋಡಿಯ ಅನಂತನಗರದ ರಿಪ್ಡ್ ಜಿಮ್‌ನಲ್ಲಿ ಟ್ರೈನರ್ ಆಗಿದ್ದ. ಅನುಷಾ ಎಂಬ ಯುವತಿಯು ಜಿಮ್‌ನಲ್ಲಿ ಸಂದೀಪ್ ಕ್ಲೈಂಟ್ ಆಗಿದ್ದಳು. ಇಬ್ಬರು ಸ್ನೇಹಿತರಾಗಿ ವಾಟ್ಸಾಪ್‌ನಲ್ಲಿ ಚಾಟಿಂಗ್ ಕೂಡ ಮಾಡುತ್ತಿದ್ದರು.
ಯುವತಿಯ ಸಹೋದರರಾದ ಗೌತಮ್, ಅರುಣ್ ಆಕೆಯ ಮೊಬೈಲ್ ಚೆಕ್ ಮಾಡಿದ್ದರು. ಈ ವೇಳೆ ಯುವತಿಯ ಮೊಬೈಲನ್ನು ಹ್ಯಾಕ್ ಮಾಡಲಾಗಿದೆ ಎಂದಿದ್ದರು. ಬಳಿಕ ಜಿಮ್‌ಗೆ ನುಗ್ಗಿದ ಅರುಣ್, ಗೌತಮ್, ಅನುಷಾ, ಮೇಘನಾ ಸೇರಿ ಇತರರು ಸಂದೀಪ್ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಗಂಭೀರ ಗಾಯಗೊಂಡ ಸಂದೀಪ್‌ನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಲ್ಲೆಯ ದೃಶ್ಯವು ಜಿಮ್‌ನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.