ಲಕ್ನೋ: ಜ್ಞಾನವಾಪಿ ಮಸೀದಿಯ (Gyanvapi mosque) ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿರುವ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಜ್ಞಾನವಾಪಿ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ.
ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿ ಜ್ಞಾನವಾಪಿ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಜಿಲ್ಲಾ ಕೋರ್ಟ್ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಫೆ.6 ರೊಳಗೆ ತನ್ನ ಮನವಿಗೆ ತಿದ್ದುಪಡಿಗಳನ್ನು ಮಾಡಲು ಮಸೀದಿ ಸಮಿತಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಅಂಜುಮನ್ ಇಂತೆಝಾಮಿಯಾ ಮಸಾಜಿದ್ ಸಮಿತಿ (ಎಐಎಂಸಿ)ಗೆ ಅಲಹಾಬಾದ್ ಹೈಕೋರ್ಟ್ ಫೆಬ್ರುವರಿ 6 ರವರೆಗೆ ಕಾಲಾವಕಾಶ ನೀಡಿತು. ಇದನ್ನೂ ಓದಿ: ಪೂಜೆಗೆ ಅವಕಾಶ ನೀಡಬೇಡಿ : ಸುಪ್ರೀಂ ಮೊರೆ ಹೋಗಿದ್ದ ಜ್ಞಾನವಾಪಿ ಮಸೀದಿ ಸಮಿತಿ – ತಡ ರಾತ್ರಿ ನಡೆದಿದ್ದು ಏನು?
ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಸಮಿತಿಯು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರವಾಲ್ ಈ ಆದೇಶವನ್ನು ನೀಡಿದ್ದಾರೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮುಸ್ಲಿಂ ಸಮಿತಿ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಸಮಿತಿಯು ಹೈಕೋರ್ಟ್‌ಗೆ ಮನವಿ ಸಲ್ಲಿಸಿತು. ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ವಾರಣಾಸಿಯಲ್ಲಿ ಬಂದ್
ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳ ಅಂಗಡಿಗಳು ಮತ್ತು ಕೆಲವು ಭಾಗಗಳನ್ನು ಮುಚ್ಚಲಾಗಿದೆ. ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ಶುಕ್ರವಾರ ನಮಾಜ್‌ಗೆ ಮುಂಚಿತವಾಗಿ ಇಡೀ ವಾರಣಾಸಿ ಜಿಲ್ಲೆಯಲ್ಲಿ ಪೊಲೀಸರು ಅಲರ್ಟ್ ಘೋಷಿಸಿದ್ದಾರೆ.
ಜ್ಞಾನವಾಪಿ ಮಸೀದಿಯ ವ್ಯವಹಾರ ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಶುಕ್ರವಾರ ಪಟ್ಟಣದಲ್ಲಿ ಬಂದ್‌ಗೆ ಕರೆ ನೀಡಿತ್ತು. ಪಟ್ಟಣದ ದಾಲ್ಮಂಡಿ, ನೈ ಸಡಕ್, ನಾಡೆಸರ್ ಮತ್ತು ಅರ್ದಲ್ ಬಜಾರ್ ಪ್ರದೇಶಗಳಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಮಾರುಕಟ್ಟೆ ಪ್ರದೇಶಗಳಲ್ಲಿ ಬಂದ್‌ನ ಪರಿಣಾಮ ಗೋಚರಿಸಿದೆ.