– ತಾನಿಷ್ಟಪಟ್ಟ ಹುಡುಗನನ್ನ ಮದುವೆಯಾಗಲು ಮುಂದಾಗಿದ್ದಕ್ಕೆ ಹತ್ಯೆ
ಗ್ವಾಲಿಯರ್: ಖುಷಿಯಾಗಿ ಹಸೆಮಣೆ ಏರಬೇಕಿದ್ದ ಮಗಳನ್ನ ಸ್ವತಃ ಅಪ್ಪನೇ ಮಸಣಕ್ಕೆ ಕಳುಹಿಸಿದ್ದಾನೆ. ಮದುವೆಗೆ (Marriage) ಇನ್ನೂ ನಾಲ್ಕು ದಿನ ಬಾಕಿಯಿರುವಾಗಲೇ 20 ವರ್ಷದ ಸ್ವಂತ ಮಗಳನ್ನು ಪೊಲೀಸರ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ.
ಮಗಳು ತಾವು ನೋಡಿದ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪದೇ, ಬಹಿರಂಗವಾಗಿ ವಿರೋಧಿಸಿದ್ದಳು. ತಾನು ಇಷ್ಟಪಟ್ಟ ಬೇರೆ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದರಿಂದ ಕೋಪದ ಕೈಗೆ ಬುದ್ಧಿಕೊಟ್ಟ ಅಪ್ಪ ತನ್ನ ಮಗಳನ್ನು ಹತ್ಯೆ ಮಾಡಿದ್ದಾನೆ. ತನು ಗುರ್ಜರ್ (20) ಕೊಲೆಯಾದ ಮಗಳು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ತಲೆ ಎಣಿಕೆ ಪಾಲಿಟಿಕ್ಸ್ – ಸಿಎಂ ಸ್ಥಾನಕ್ಕಲ್ಲ.. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ?
ಮಂಗಳವಾರ ಸಂಜೆ 9 ಗಂಟೆ ಸುಮಾರಿಗೆ ನಗರದ ಗೋಲಾ ಕಾ ಮಂದಿರ ಪ್ರದೇಶದಲ್ಲಿ ಈ ಕೊಲೆ ನಡೆದಿದೆ. ಅದೇ ದಿನ ಬೆಳಗ್ಗೆ ತನ್ನ ಮಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡಿದ ವೀಡಿಯೊದಿಂದ ಕೋಪಗೊಂಡ ತಂದೆ ಮಹೇಶ್ ಗುರ್ಜರ್ ದೇಶಿ ಬಂದೂಕಿನಿಂದ ಆಕೆಗೆ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ತನುವಿನ ಸೋದರ ಸಂಬಂಧಿ ರಾಹುಲ್ ಮಹೇಶ್ ಗುರ್ಜರ್‌ನ ಈ ಕೆಲಸಕ್ಕೆ ಸಹಚರನಾಗಿ ಕಾರ್ಯನಿರ್ವಹಿಸಿದ್ದು, ಹೆಚ್ಚುವರಿ ಗುಂಡುಗಳನ್ನು ಹಾರಿಸಿ ಆಕೆಯ ಸಾವನ್ನು ಖಚಿತಪಡಿಸಿದ್ದಾನೆ.
ತನ್ನ ಹತ್ಯೆಗೆ ಕೆಲವೇ ಗಂಟೆಗಳ ಮೊದಲು, ತನು ಗುರ್ಜರ್ ತನ್ನ ಕುಟುಂಬದವರು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. 52 ಸೆಕೆಂಡುಗಳ ವೀಡಿಯೊದಲ್ಲಿ, ತನ್ನ ತಂದೆ ಮಹೇಶ್ ಮತ್ತು ಇತರ ಕುಟುಂಬ ಸದಸ್ಯರು ತನ್ನ ಸಂಕಷ್ಟಕ್ಕೆ ಕಾರಣರೆಂದು ಹೇಳಿದ್ದು, ತನಗೆ ಜೀವಭಯವಿದೆ ಎಂದು ಹೇಳಿಕೊಂಡಿದ್ದಳು. ನಾನು ವಿಕ್ಕಿ ಎಂಬಾತನನ್ನ ಮದುವೆಯಾಗಲು ಬಯಸಿದ್ದೇನೆ. ನನ್ನ ಮನೆಯವರು ಆರಂಭದಲ್ಲಿ ಇದಕ್ಕೆ ಒಪ್ಪಿದ್ದರು, ನಂತರ ನಿರಾಕರಿಸಿದರು. ಅವರು ಪ್ರತಿದಿನ ನನ್ನನ್ನ ಹೊಡೆಯುತ್ತಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಏನಾದರೂ ಸಂಭವಿಸಿದರೆ, ನನ್ನ ಕುಟುಂಬವೇ ಜವಾಬ್ದಾರವಾಗಿರುತ್ತದೆ ಎಂದು ತನು ವಿಡಿಯೋನಲ್ಲಿ ಹೇಳಿಕೊಂಡಿದ್ದಳು.
ಈಕೆ ವೀಡಿಯೋದಲ್ಲಿ ಉಲ್ಲೇಖಿಸಿದ ವಿಕ್ಕಿ ಎಂಬಾತ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, 6 ವರ್ಷಗಳಿಂದ ತನು ಜೊತೆ ಸಂಬಂಧ ಹೊಂದಿದ್ದ. ತನು ಗುರ್ಜರ್‌ನ ವೀಡಿಯೋ ವೈರಲ್ ಆದ ನಂತರ, ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳು ತನುವಿನ ಪೋಷಕರು ಹಾಗೂ ಆಕೆಯೊಂದಿಗೆ ಮಧ್ಯಸ್ಥಿಕೆ ವಹಿಸಲು ತನು ಅವರ ಮನೆಗೆ ಧಾವಿಸಿದರು. ಸಮುದಾಯದ ಪಂಚಾಯತ್ ಕೂಡ ನಡೆಯುತ್ತಿದ್ದು, ವಿಷಯವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು, ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಗುಂಡು ಹಾರಿಸಿದ್ದಾನೆ.. ಇದನ್ನೂ ಓದಿ: ಮಂಗಳೂರು| ಹಳೆ ನಾಣ್ಯ ಖರೀದಿಸುವುದಾಗಿ ಹೇಳಿ ವ್ಯಕ್ತಿಗೆ 58 ಲಕ್ಷ ವಂಚನೆ
ಇದೇ ಜನವರಿ 18ರಂದು ಮಗಳ ಮದುವೆ ನಡೆಯಬೇಕಿತ್ತು. ಅದಕ್ಕಾಗಿ ಸಕಲ ಸಿದ್ಧತೆಯೂ ಮಾಡಿಕೊಳ್ಳಲಾಗಿತ್ತು. ಸದ್ಯ ಗುಂಡಿಕ್ಕಿ ಹತ್ಯೆಗೈದ ತಂದೆ ಮಹೇಶ್ ಗುರ್ಜರ್‌ನನ್ನ ಪೊಲೀಸರು ಬಂಧಿಸಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ರಾಹುಲ್ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್