ರಾಯಚೂರು: ಮಂತ್ರಾಲಯದಲ್ಲಿ (Mantralaya) ಅದ್ಧೂರಿಯಾಗಿ ನಡೆದ ಗುರು ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಹಾಗೂ ಹಿರಿಯ ನಟ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಭಾಗವಹಿಸಿ ಗುರುವೈಭವೋತ್ಸವದ (Guruvaibhavotsava) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ರಾಯರ ವೃಂದಾವನ ದರ್ಶನ ಪಡೆದು, ಮಠದ ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಠದ ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ಗುರುವೈಭವೋತ್ಸವ ಪ್ರಶಸ್ತಿ ವಿಶೇಷ ಸನ್ಮಾನ ಮಾಡಲಾಯಿತು. ನಟ ಜಗ್ಗೇಶ್ ಹಾಗೂ ರಿಷಬ್ ಶೆಟ್ಟಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇದೇ ವೇಳೆ ಭಕ್ತರು ಶ್ರೀಗಳನ್ನೂ ವಿಶೇಷವಾಗಿ ಪುಷ್ಪವೃಷ್ಠಿ ಮೂಲಕ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ನನ್ನ ತಾಯಿ ಗುರುರಾಯರಿಗೆ ಹರಕೆ ಹೊತ್ತ ಬಳಿಕ ನಾನು ಹುಟ್ಟಿದ್ದೇನೆ, ಅದೂ ರಾಯರ ವಾರ ಗುರುವಾರದಂದೇ ಹುಟ್ಟಿದ್ದೇನೆ. ಚಿಕ್ಕವಯಸ್ಸಿನಿಂದಲೂ ಮಂತ್ರಾಲಯಕ್ಕೆ ಬರುತ್ತಿದ್ದೇನೆ, ಕಷ್ಟ ಕಾಲದಲ್ಲಿ ರಾಯರನ್ನ ನೆನೆದರೆ ಕಷ್ಟಗಳು ದೂರವಾಗುತ್ತವೆ. ನನ್ನ ತಾಯಿಯೂ ಏನೇ ಕಷ್ಟಗಳಿದ್ದರೂ ರಾಯರನ್ನ ನೆನೆಸಿಕೊಂಡು ಮುಂದೆ ಹೋಗು ಅಂತ ಹೇಳುತ್ತಾರೆ. ಎಷ್ಟೋ ಸಾರಿ ಶೂಟಿಂಗ್‌ನಲ್ಲಿ ಏನೇ ಕಷ್ಟ ಬಂದರೂ ರಾಯರ ನೆನೆದಾಗ ಕಣ್ಮುಚ್ಚಿ ತೆಗೆಯುವುದರಲ್ಲಿ ಪಾರಾಗಿ ಹೋದಂತ ಅನುಭವಗಳಾಗಿವೆ ಎಂದು ಹೇಳಿದರು.

ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್, ಕಲಿಯುಗದಲ್ಲಿ ಕಲ್ಪತರು ಕಾಮಧೇನು ಅಂದ್ರೆ ಅದು ರಾಯರು, ರಾಯರ ಪೀಠ ಹಾಗೂ ಶ್ರೀಗಳು ಅಂತ ಮಂತ್ರಾಲಯ ಮಹಿಮೆಯನ್ನು ಕೊಂಡಾಡಿದರು. ಇನ್ನೂ ಕನ್ನಡದ ಹೆಸರನ್ನ ಇಡೀ ವಿಶ್ವಕ್ಕೆ ತಲುಪಿಸಿದ ಅದ್ಭುತ ನಟ ರಿಷಬ್ ಶೆಟ್ಟಿ, ಕೆಲವು ಪಾತ್ರ ಸಿನೆಮಾ ಮಾಡಬೇಕು ಅಂದ್ರೆ ದೈವ ಪ್ರೇರಣೆಯಾಗಬೇಕು. ರಾಯರ ನೆರಳಿನಂತೆ ಹನುಮ ಅಂತಾರೆ ಅಂತಹ ಹನುಮಂತನ ಸಿನೆಮಾ ಮಾಡುತ್ತಿದ್ದಾರೆ. ಹನುಮ ಜನ್ಮಸ್ಥಳದಲ್ಲೆ ಅದು ಆರಂಭವಾಗಬೇಕು ಅಂತ ಆರಂಭಿಸಿದ್ದಾರೆ. ನಮ್ಮ ಹನುಮ ಕನ್ನಡಿಗ ಅನ್ನೋದು ನಮ್ಮ ದೊಡ್ಡ ಹೆಮ್ಮೆ ಅಂತ ಜಗ್ಗೇಶ್ ಹೇಳಿದರು. ಇನ್ನೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಏಳು ದಿನಗಳ ಗುರುವೈಭವೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ.

