ಮಂತ್ರಾಲಯ: ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಕಳೆದ ಆರು ದಿನಗಳಿಂದ ನಡೆದ ಗುರುವೈಭವೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ರಾಘವೇಂದ್ರ ಸ್ವಾಮಿಗಳ 422ನೇ ವರ್ಧಂತಿ ಉತ್ಸವ ಅದ್ಧೂರಿಯಾಗಿ ನಡೆಯುವ ಮೂಲಕ ಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಂತ್ಯಗೊಂಡವು. ರಾಯರ ಹುಟ್ಟುಹಬ್ಬದ ನಿಮಿತ್ತ ತಮಿಳುನಾಡಿನ ನೂರಾರು ಕಲಾವಿದರು ಏಕಕಾಲಕ್ಕೆ ಸಂಗೀತ ಸುಧೆಯನ್ನ ಹರಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಕಲಿಯುಗ ಕಾಮಧೇನು, ಭಕ್ತರ ಪಾಲಿನ ಆರಾಧ್ಯ ದೈವ ಗುರು ರಾಘವೇಂದ್ರ ಸ್ವಾಮಿಗಳು ಜನಿಸಿ 422 ವರ್ಷಗಳು ಸಂದಿವೆ. ಹೀಗಾಗಿ ರಾಯರ ವರ್ಧಂತಿ ಉತ್ಸವವನ್ನ ಗುರು ವೈಭವೋತ್ಸವವಾಗಿ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ರಾಯರ ಪಾದುಕೆಗಳಿಗೆ ಮುತ್ತಿನ ಅಭಿಷೇಕ, ಪುಷ್ಪ ಅಭಿಷೇಕದ ಜೊತೆ ರಥೋತ್ಸವ ನೆರವೇರಿಸಲಾಯಿತು. ರಾಯರ ಮೂಲ ಹೆಸರು ವೆಂಕಟನಾಥ. ಹಂಸನಾಮಕ ಪರಮಾತ್ಮನ ಮಧ್ವಚಾರ್ಯರ ಪೀಠಕ್ಕೆ ಪಟ್ಟಾಭೀಷೇಕವಾದ ಬಳಿಕ ರಾಘವೇಂದ್ರ ತೀರ್ಥ ಸ್ವಾಮಿಗಳಾದ್ರು. 396 ವರ್ಷಗಳ ಹಿಂದೆ ರಾಯರ ಗುರುಗಳಾದ ಸುಧೀಂದ್ರ ತೀರ್ಥರು ಈ ಜಗದ್ಗುರು ಪೀಠದಲ್ಲಿ ರಾಯರನ್ನ ಕೂರಿಸಿದ್ರು. ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನೇ ಈಗ ವೈಭವೋತ್ಸವವಾಗಿ ಆರು ದಿನಗಳ ಕಾಲ ಆಚರಿಸಲಾಗುತ್ತಿದೆ.
ಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆಯಿಂದಲೇ ಸುಪ್ರಭಾತ, ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ ನೆರವೇರಿವೆ. ಅಲಂಕಾರ ಸೇವೆ ,ಉತ್ಸವಮೂರ್ತಿ ಪ್ರಹ್ಲಾದರಾಜರ ಮೆರವಣಿಗೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾ ಪಂಚಾಮೃತ ಅಭಿಷೇಕ, ಸಿಂಹವಾಹನೋತ್ಸವ, ಬಂಗಾರದ ರಥೋತ್ಸವ ಜರುಗಿದವು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹರಾಷ್ಟ್ರಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಾಯರ ಉತ್ಸವದ ವೈಭವಕ್ಕೆ ಸಾಕ್ಷಿಯಾದರು. ಪ್ರತಿ ವರ್ಷದಂತೆ ರಾಯರ ಜನ್ಮನಾಡು ತಮಿಳುನಾಡಿನ 300 ಕ್ಕೂ ಹೆಚ್ಚು ಕಲಾವಿದರು ನಾದಹಾರ ಕಾರ್ಯಕ್ರಮದ ಮೂಲಕ ರಾಯರಿಗೆ ನಾದ ನಮನ ಸಲ್ಲಿಸಿದರು.
ಒಟ್ನಲ್ಲಿ, ಆರು ದಿನಗಳ ಕಾಲ ಇಡೀ ಮಂತ್ರಾಲಯ ಗುರು ವೈಭವೋತ್ಸವದ ಸಂಭ್ರಮದಲ್ಲಿ ಮುಳುಗಿದ್ದಿದಂತೂ ನಿಜ. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಪ್ರವಚನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನದ ಮೂಲಕ ಉತ್ಸವಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು.