ರಾಯಚೂರು: ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ ರಾಯರ ಗುರು ವೈಭವೋತ್ಸವದ ಸಂಭ್ರಮಕ್ಕೆ ಬುಧವಾರ ವಿದ್ಯುಕ್ತ ತೆರೆ ಬಿದ್ದಿದೆ. ಗುರು ರಾಘವೇಂದ್ರ ಸ್ವಾಮಿಗಳ 398ನೇ ಪಟ್ಟಾಭಿಷೇಕ ಹಾಗೂ 424ನೇ ವರ್ಧಂತಿ ಉತ್ಸವ ಅಂಗವಾಗಿ ಆಚರಣೆಗೆ ಬಂದಿರುವ ಗುರು ವೈಭವೋತ್ಸವ ಅದ್ಧೂರಿಯಾಗಿ ನಡೆಯಿತು. ಬೇಸಿಗೆ ಹಾಗೂ ಬರಗಾಲದಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾದ್ರು ಗುರು ವೈಭವೋತ್ಸವದ ವೈಭವ ಪ್ರತಿವರ್ಷದಂತೆ ನಡೆದಿದೆ.
ಕಲಿಯುಗ ಕಾಮಧೇನು ಅಂತಲೇ ಕರೆಯಿಸಿಕೊಳ್ಳುವ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಅವರ ಬುಧವಾರ 424ನೇ ಹುಟ್ಟುಹಬ್ಬ. ಈ ದಿನವನ್ನು ರಾಯರ ಭಕ್ತರು ವರ್ಧಂತೋತ್ಸವವಾಗಿ ಸಂಭ್ರಮದಿಂದ ಮಂತ್ರಾಲಯ ಸೇರಿದಂತೆ ಎಲ್ಲೆಡೆ ಆಚರಿಸಿದ್ದಾರೆ. ಮಾರ್ಚ್ 8 ರಂದು ರಾಯರ 396ನೇ ಪಟ್ಟಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
Advertisement
Advertisement
ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ಹಿನ್ನೆಲೆ ಮಂತ್ರಾಲಯದಲ್ಲಿ 6 ದಿನ ಕಾಲ ಗುರು ವೈಭವೋತ್ಸವವನ್ನು ಆಚರಿಸಲಾಗಿದೆ. ಈ 6 ದಿನ ಕಾಲ ಬೆಳಗ್ಗೆಯಿಂದಲೇ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಮೂಲ ರಾಮದೇವರ ಪೂಜೆ ನಡೆಯಿತು. ಬುಧವಾರ ರಾಯರ ಪಾದುಕೆಗಳನ್ನು ನವರತ್ನಖಚಿತ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಹಿಂದಿನಿಂದ ಬಂದ ಪರಂಪರೆಯನ್ನು ಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
Advertisement
Advertisement
ಪ್ರತಿ ಬಾರಿಯಂತೆ ಈ ಬಾರಿಯೂ ವರ್ಧಂತಿ ಉತ್ಸವಕ್ಕೆ ವಿಶೇಷವಾಗಿ ತಿರುಪತಿ ತಿರುಮಲ ದೇವಾಲಯದಿಂದ ರಾಯರಿಗೆ ಪಟ್ಟವಸ್ತ್ರಗಳ ಸಮರ್ಪಣೆ ನಡೆಯಿತು. ತಮಿಳುನಾಡಿನ ಚೆನೈನ ನಾದಹಾರ ಸೇವಾ ಟ್ರಸ್ಟ್ ನ 450ಕ್ಕೂ ಹೆಚ್ಚು ಕಲಾವಿದರು ಒಟ್ಟಿಗೆ ಹಾಡುವ ಮೂಲಕ ನಾದಸೇವೆಯನ್ನು ಮಾಡಿದರು. ಕಳೆದ 15 ವರ್ಷಗಳಿಂದ ನಾದಹಾರ ಸೇವೆಯನ್ನ ಈ ಭಕ್ತರು ನೆರವೇರಿಸತ್ತಾ ಬಂದಿದ್ದಾರೆ.
ಗುರುವೈಭವೋತ್ಸವ ಹಿನ್ನೆಲೆ ಮಠದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಪ್ರವಚನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ. ಬುಧವಾರ ಉತ್ಸವಕ್ಕೆ ತೆರೆಬಿದ್ದಿದ್ದು, ನಾನಾ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿದ ಭಕ್ತರು ಗುರುವೈಭವೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv