ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕಟ್ಟುಮಸ್ತಾದ ನಾಯಕ ನಟನ ಆಗಮನವಾಗುತ್ತಿದೆ. ಅಷ್ಟಕ್ಕೂ ಈ ಹಿಂದೆ ಗನ್ಸ್ ಅಂಡ್ ರೋಸಸ್ ಚಿತ್ರದ ಟೀಸರ್ ಲಾಂಚ್ ಆದಾಗಲೇ ನಾಯಕ ಅರ್ಜುನ್ ಗಮನ ಸೆಳೆದಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಗನ್ಸ್ ಅಂಡ್ ರೋಸಸ್ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಟೀಸರ್ ನಲ್ಲಿ ಇವರ ಪಾತ್ರದ ಚಹರೆ ಕಂಡವರು ಮಾತ್ರವಲ್ಲ; ಪರಭಾಷಾ ಚಿತ್ರರಂಗದ ವಿತರಕರೂ ಕೂಡಾ ಅರ್ಜುನ್ ನಟನೆಯ ಪರಿ ಕಂಡು ಖುಷಿಗೊಂಡಿದ್ದಾರಂತೆ. ಇದು ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಪ್ಯಾನ್ ಇಂಡಿಯಾ ಮಟ್ಟ ಮುಟ್ಟುತ್ತಿರುವ ಖುಷಿ ಅರ್ಜುನ್ ಅವರಲ್ಲಿದೆ.
Advertisement
ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ. ಈಗಿನ ಜನರೇಷನ್ ಅನ್ನು ಸೆಳೆಯುತ್ತಲೇ, ಅವರಿಗಾಗಿ ಸಂದೇಶವನ್ನೂ ಬಚ್ಚಿಟ್ಟುಕೊಂಡಿರುವ ಈ ಚಿತ್ರ ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿಯೇ ರೂಪುಗೊಂಡಿದೆ. ಸಿನಿಮಾ ವಾತಾವರಣದಲ್ಲಿಯೇ ಬೆಳೆದು ಬಂದಿರುವ ಅರ್ಜುನ್ ಸಾಕಷ್ಟು ತಯಾರಿ ನಡೆಸಿಯೇ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಅರ್ಜುನ್ ಅವರ ತಂದೆ ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಅಜಯ್ ಕುಮಾರ್. ಈ ಕಾರಣದಿಂದಲೇ ಸಿನಿಮಾ ವಾತಾವರಣ ಅರ್ಜುನ್ ಪಾಲಿಗೆ ಎಳವೆಯಿಂದಲೇ ಸಿಕ್ಕಿತ್ತು. ಆ ಹಂತದಲ್ಲಿಯೇ ನಟನಾಗಬೇಕೆಂಬ ಆಸೆಯೂ ಚಿಗುರಿಕೊಂಡಿತ್ತು. ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್ – ಜ.5 ರಿಂದ ಬಸ್ ಪ್ರಯಾಣ ದರ ಏರಿಕೆ
Advertisement
Advertisement
ಈ ನಡುವೆ 2008ರಲ್ಲಿ ತೆರೆಗಂಡಿದ್ದ ನಂದ ಲವ್ಸ್ ನಂದಿತಾ ಚಿತ್ರಕ್ಕೆ ಅಜಯ್ ಕುಮಾರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದರು. ಆ ಸಿನಿಮಾದಲ್ಲಿ ಲೂಸ್ ಮಾದ ಯೋಗಿಯ ಬಾಲ್ಯದ ಪಾತ್ರದ ಮೂಲಕ ಅರ್ಜುನ್ ಮೊದಲ ಸಲ ಬಣ್ಣ ಹಚ್ಚಿದ್ದರು. ಅಲ್ಲಿಂದಾಚೆಗೆ ಓದು ಪೂರ್ಣಗೊಳ್ಳುವವರೆಗೂ ಅಜಯ್ ಅವರು ತನ್ನ ಮಗನನ್ನು ಸಿನಿಮಾದಿಂದ ದೂರವಿಟ್ಟಿದ್ದರು. ಬಳಿಕ ಒಂದಷ್ಟು ಅವಕಾಶಗಳು ಬಂದರೂ ಸಾಕಷ್ಟು ತಯಾರಿ ನಡೆಸಿ, ಓದೆಲ್ಲ ಮುಗಿದ ನಂತರ ಪ್ರಯತ್ನಿಸುವಂತೆ ಮಗನಿಗೆ ತಾಕೀತು ಮಾಡಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದ್ದ ಅರ್ಜುನ್ ಸಿನಿಮಾ ತರಬೇತಿ ಪಡೆದು, ಡ್ಯಾನ್ಸ್, ಫೈಟ್, ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡು ಗನ್ಸ್ ಅಂಡ್ ರೋಸಸ್ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ.
Advertisement
ಇಲ್ಲಿ ಅವರಿಗೆ ಪವರ್ ಫುಲ್ ಪಾತ್ರವೇ ಸಿಕ್ಕಿದೆ. ಮಾತು ಕಡಿಮೆ ಕೆಲಸ ಜಾಸ್ತಿ ಎಂಬಂಥಾ ಗುಣ ಲಕ್ಷಣ ಹೊಂದಿರೋ ಪಾತ್ರವದು. ಈಗಿನ ಯುವ ಸಮುದಾಯದ ಬದುಕಿಗೆ ಕನ್ನಡಿ ಹಿಡಿದಂಥಾ ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಅವರಲ್ಲಿದೆ. ಹಿರಿಯ ನಟರ ಜೊತೆ ನಟಿಸುತ್ತಾ, ಅವರಿಂದ ಪಾಠ ಕಲಿಯುತ್ತಾ, ತಮ್ಮನ್ನು ತಾವೇ ತಿದ್ದಿಕೊಂಡು ನಟನಾಗಿ ರೂಪುಗೊಂಡ ಬಗ್ಗೆ ಅವರಲ್ಲೊಂದು ಹೆಮ್ಮೆ ಇದ್ದಂತಿದೆ. ಸಿನಿಮಾ ಸಂಬಂಧಿತವಾದ ವಿದ್ಯೆಗಳನ್ನೆಲ್ಲ ಕಲಿತು ಬಂದಿದ್ದರೂ, ಸಿನಿಮಾ ಸೆಟ್ಟು, ಕ್ಯಾಮೆರಾ ಮುಂದಿನ ಜಗತ್ತೇ ಬೇರೆಯದ್ದಿರುತ್ತೆ. ಆ ಜಗತ್ತಿಗೆ ತನ್ನನ್ನು ತಾನು ಒಡ್ಡಿಕೊಂಡು, ನಾಯಕನ ಪಾತ್ರವನ್ನು ಒಳಗಿಳಿಸಿಕೊಂಡಿರೋ ಅರ್ಜುನ್ ಪಾಲಿಗೆ ಈ ಸಿನಿಮಾ ಮೂಲಕವೇ ಗಟ್ಟಿಯಾಗಿ ನೆಲೆಕಂಡುಕೊಳ್ಳುವ ಭರವಸೆಯೂ ಇದೆ.
ಇಲ್ಲಿ ನಾನಾ ಚಹರೆಗಳನ್ನು ಹೊಂದಿರುವ ಪಾತ್ರಕ್ಕೆ ಅರ್ಜುನ್ ಜೀವ ತುಂಬಿದ್ದಾರೆ. ಅದಕ್ಕಾಗಿ ತಿಂಗಳುಗಟ್ಟಲೆ ತಯಾರಿ ನಡೆಸಿದ್ದಾರೆ. ಪಕ್ಕಾ ಆಕ್ಷನ್ ಸೀನುಗಳಲ್ಲಿಯೂ ಕೂಡಾ ಅವರು ಮಿಂಚಿದ್ದಾರಂತೆ. ಈಗಂತೂ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನ ಪ್ರೇಕ್ಷಕ ವಲಯದಲ್ಲಿದೆ. ಗಟ್ಟಿ ಕಥೆಯೊಂದಿಗೆ, ಕಮರ್ಶಿಯಲ್ ಜಾಡಿನಲ್ಲಿ ರೂಪುಗೊಂಡ ಈ ಸಿನಿಮಾ ಅಂಥಾ ಪ್ರೇಕ್ಷಕರೊಂದಿಗೆ ಎಲ್ಲ ಅಭಿರುಚಿಯವರನ್ನೂ ಸೆಳೆಯುವಂತೆ ಮೂಡಿ ಬಂದಿದೆ ಎಂಬುದು ಅರ್ಜುನ್ ಅಭಿಪ್ರಾಯ. ಪ್ರಥಮ ಚಿತ್ರದ ಮೂಲಕವೇ ಬಹುಭಾಷೆಗಳ ಪ್ರೇಕ್ಷಕರನ್ನು ತಲುಪುತ್ತಿರೋ ಥ್ರಿಲ್ ಕೂಡಾ ಸಹಜವಾಗಿಯೇ ಅರ್ಜುನ್ ರನ್ನು ಆವರಿಸಿಕೊಂಡಿದೆ. ಇದನ್ನೂ ಓದಿ: ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik
ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಗನ್ಸ್ ಅಂಡ್ ರೋಸಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅರ್ಜುನ್ ಗೆ ಯಶ್ವಿಕಾ ನಿಷ್ಕಲಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆ ಕಾಣಲಿದೆ.