ಗನ್ಸ್ ಅಂಡ್ ರೋಸಸ್ ಸಂಗೀತ ಸಾರಥಿ ಶಶಿಕುಮಾರ್!

Public TV
3 Min Read
guns and roses

ಸಂಗೀತವನ್ನೇ ಜಗತ್ತಾಗಿಸಿಕೊಂಡ ಸಾಹಸಿ!

ಯಾವುದೇ ಸಿನಿಮಾದ ಹಿಂದೆ ಹತ್ತಾರು ಮಂದಿಯ ಕನಸಿರುತ್ತದೆ. ಟರ್ನಿಂಗ್ ಪಾಯಿಂಟ್ ಅನ್ನೋ ಮಾಯೆ ಈ ಮೂಲಕವೇ ಧುತ್ತನೆದುರಾದೀತೆಂದು ಅದರ ಭಾಗವಾದ ಬಹುತೇಕರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಮತ್ತೊಂದಷ್ಟು ಮಂದಿಯ ಜೀವಮಾನದ ಕನಸು ಇಂಥಾ ಸಿನಿಮಾ ಮೂಲಕವೇ ಸಾಕಾರಗೊಳ್ಳೋದೂ ಇದೆ. ಸದ್ಯ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಗನ್ಸ್ ಅಂಡ್ ರೋಸಸ್’ (Guns And Roses) ಚಿತ್ರದ ಮೂಲಕ ಶಶಿಕುಮಾರ್ (Shashi Kumar) ಅವರ ಮಹಾ ಕನಸು ಸಾಕಾರಗೊಂಡಿದೆ. ಸಂಗೀತವನ್ನೇ ಬದುಕಾಗಿಸಿಕೊಂಡು, ಆ ಕ್ಷೇತ್ರದಲ್ಲೇ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಹೊಂದಿದ್ದವರು ಶಶಿ ಕುಮಾರ್. ಈ ಹಾದಿಯಲ್ಲಿ ಬದುಕೆಂಬುದು ಆಗಾಗ ಬ್ಯಾಲೆನ್ಸು ತಪ್ಪಿಸಿದೆ. ಮತ್ತೆಲ್ಲೋ ಹೊಯ್ದಾಡಿಸಿದೆ. ಆದರೆ, ಸಂಗೀತ ಗುಂಗಿನಲ್ಲಿಯೇ ಸಾಗಿ ಬಂದಿರುವ ಶಶಿ ಗನ್ಸ್ ಅಂಡ್ ರೋಸಸ್ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದಾರೆ.

Guns and Roses Kannada Movie Team 2

ಎಂಬಿಎ ಮುಗಿಸಿಕೊಂಡು ಬದುಕಿಗಾಗಿ ಯಾವುದಾದರೊಂದು ಕೆಲಸ ಮಾಡುವ ಅನುವಾರ್ಯತೆ ಶಶಿಕುಮಾರ್ ಮುಂದಿತ್ತು. ಆದರೆ, ಸಂಗೀತವನ್ನು ಬಿಟ್ಟು ಬೇರೇನೇ ಮಾಡಿದರೂ ವ್ಯರ್ಥ ಎಂಬಂಥಾ ಮನಃಸ್ಥಿತಿ ಕೂಡ ಅವರನ್ನು ಆವರಿಸಿಕೊಂಡಿತ್ತು. ಒಂದು ವೇಳೆ ಬೇರೆ ಕಸುಬು ಮಾಡಿದರೂ ಅದು ತನ್ನ ಕನಸಿಗೆ ಮೆಟ್ಟಿಲಾಗುವಂತಿರಬೇಕು ಅನ್ನೋ ಆಕಾಂಕ್ಷೆಯೇ ಅನೇಕ ಸಾಹಸಗಳಿಗೂ ಪ್ರೇರೇಪಿಸಿತ್ತು. ಬಹುಶಃ ಬಂದ ಕಷ್ಟ ನಷ್ಟಗಳನ್ನೆಲ್ಲ ಅನುಭವಿಸಿ, ಅವುಡುಗಚ್ಚಿ ಮುಂದುವರೆಯದಿದ್ದರೆ, ಸಿಂಪೋನಿಯನ್ಸ್ ಎಂಬ ಕಂಪೆನಿ ಹುಟ್ಟುತ್ತಿರಲಿಲ್ಲ. ನಾನಾ ದಿಕ್ಕಿನಲ್ಲಿ ಪಳಗಿಕೊಂಡು, ‘ಗನ್ಸ್ ಅಂಡ್ ರೋಸಸ್’ ಚಿತ್ರದ ಸಂಗೀತ ನಿರ್ದೇಶಕರಾಗೋದೂ ಸಹ ಕನಸಿನ ಮಾತಾಗಿರುತ್ತಿತ್ತು.

Guns and Roses Kannada Movie Team
ಶಶಿಕುಮಾರ್ 2018ರಿಂದ ಸಿಂಫೋನಿಯನ್ಸ್ ಎಂಬ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ. ಇದರ ನೆರಳಿನಲ್ಲಿ ಆಡಿಯೋ ಮತ್ತು ಮ್ಯೂಸಿಕ್ ಸಂಬಂಧಿತ ಕೆಲಸ ಕಾರ್ಯಗಳು ನಡೆಯುತ್ತವೆ. ಲೈವ್ ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳೆಲ್ಲವೂ ಇಲ್ಲಿಯೇ ನಡೆಯುವಂಥಾ ವಾತಾವರಣ ಕಲ್ಪಿಸಲಾಗಿದೆ. ಹೀಗೆ ಸಂಗೀತದ ಅಪ್ಪುಗೆಯಲ್ಲಿಯೇ ಅನ್ನದ ಮೂಲ ಕಂಡುಕೊಂಡಿರುವ ಶಶಿಕುಮಾರ್ ಪಾಲಿಗೆ ಈ ಕ್ಷೇತ್ರದಲ್ಲಿಯೇ ಸಾಧಿಸಬೇಕೆಂಬ ಹಂಬಲವಿತ್ತು. ಅದರ ಸಲುವಾಗಿಯೇ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದ ಫಲವಾಗಿಯೇ ‘ಗನ್ಸ್ ಅಂಡ್ ರೋಸಸ್’ ಚಿತ್ರದ ಸಂಗೀತ ನಿರ್ದೇಶನದ ಅವಕಾಶ ಒಲಿದು ಬಂದಿತ್ತು. ಇದನ್ನೂ ಓದಿ:ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

guns and roses

ಇಲ್ಲಿರುವ 4 ಹಾಡುಗಳನ್ನು ಒಂದಕ್ಕೊಂದು ಭಿನ್ನವೆಂಬಂತೆ ರೂಪಿಸುವ ಜವಾಬ್ದಾರಿ ಶಶಿ ಮೇಲಿತ್ತು. ಒಂದು ಥೀಮ್ ಸಾಂಗ್, ಎಣ್ಣೆ ಕಂ ಪ್ಯಾಥೋ, ಈಗಿನ ಯುವ ಜನಾಂಗವನ್ನು ಪಟ್ಟಂಪೂರಾ ಆವರಿಸಿಕೊಳ್ಳಬಲ್ಲ ರ್ಯಾಪ್ ಸಾಂಗ್ ಅನ್ನು ಬಲು ಆಸ್ಥೆಯಿಂದ ಶಶಿ ರೂಪಿಸಿದ್ದಾರಂತೆ. ಇದುವರೆಗೂ ಶಾರ್ಟ್ ಮೂವಿಗಳಿಗೆ ಕೆಲಸ ಮಾಡಿದ್ದರು. ತಂಬೂರ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಮೂಲಕ ಶಶಿ ಕನಸು ನನಸಾಗಿತ್ತು. ಅದು ಅವರ ಮೊದಲ ಚಿತ್ರವಾಗಿ ದಾಖಲಾಗುತ್ತದೆ. ಖ್ಯಾತ ನಿರ್ದೇಶಕ ಪಿ.ಹೆಚ್ ವಿಶ್ವನಾಥ್ ಅವರ ಆಡೇ ನಮ್ ಗಾಡು ಚಿತ್ರಕ್ಕೂ ಹಿನ್ನೆಲೆ ಸಂಗೀತ ನೀಡಿದ್ದರು. ಇದೆಲ್ಲವೂ ಸಂಗೀತದ ಭಾಗವೇ ಆಗಿದ್ದರೂ ಕೂಡಾ, ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಬೇಂಬುದು ಶಶಿಕುಮಾರ್‌ರ ಇರಾದೆಯಾಗಿತ್ತು. ಅದು ‘ಗನ್ಸ್ ಅಂಡ್ ರೋಸಸ್’ ಮೂಲಕ ಸಾಕಾರಗೊಂಡಿದೆ. ಈ ಹಾಡುಗಳೆಲ್ಲವೂ ಕೇಳುಗರಿಗೆ ಹಿಡಿಸುವ ಮೂಲಕ ಮೊದಲ ಹೆಜ್ಜೆ ಸಾರ್ಥಕಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ.

Guns and Roses
ಹಾಗೆ ನೋಡಿದರೆ, ಶಶಿಕುಮಾರ್ ಬಹುಮುಖ ಪ್ರತಿಭೆ. ಸಂಗೀತದ ಹಲವು ಆಯಾಮಗಳನ್ನು ಒಳಗಿಳಿಸಿಕೊಂಡು ಪಳಗಬೇಕೆಂಬ ತಪನೆಯೊಂದನ್ನು ಬೆಚ್ಚಗಿಟ್ಟುಕೊಂಡವರು ಶಶಿ. ತಾನು ಏನೇ ಮಾಡಿದರೂ ಅದು ಸಂಗೀತಕ್ಕೆ ಸಂಬಂಧಿಸಿದ್ದೇ ಆಗಿರಬೇಕೆಂಬುದು ಅವರ ಹಂಬಲ. ಅದರ ಭಾಗವಾಗಿಯೇ ಸಂಗೀತಕ್ಕೆ ಸಂಬಂಧಿಸಿದ ಟೀಚಿಂಗ್ ವೃತ್ತಿಯನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ಆರಂಭದಿಂದಲೂ ಮ್ಯೂಸಿಕ್ ಕಂಪೆನಿ ಒಂದನ್ನು ಕಟ್ಟಬೇಕೆಂಬ ಆಸೆ ಹೊಂದಿದ್ದ ಅವರು, ಅದಕ್ಕಾಗಿ ನಡೆಸಿದ್ದ ಸರ್ಕಸ್ಸುಗಳು ಒಂದೆರಡಲ್ಲ. ಕಾಸು ಹೊಂದಿಸುವ ಉದ್ದೇಶದಿಂದಲೇ ಕಂಪೆನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಶಶಿ, 2018ರಲ್ಲಿ ಸಿಂಪೋನಿಯನ್ಸ್ ಎಂಬ ಸಂಸ್ಥೆ ಕಟ್ಟುವ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದರು. ಇದೀಗ ಗನ್ಸ್ ಅಂಡ್ ರೋಸಸ್ ಮೂಲಕ ಅವರ ವೃತ್ತಿ ಬದುಕು ನಿರ್ಣಾಯಕ ಘಟ್ಟದತ್ತ ಹೊರಳಿಕೊಂಡಿದೆ. ಈಗಿರುವ ವಾತಾವರಣ ಗಮನಿಸಿದರೆ, ಅದು ಅಲ್ಲಿಯೇ ಹುಲುಸಾಗಿ ಬೆಳೆದು ನಿಲ್ಲುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

Guns and Roses 1

ಇಂಥಾ ಹಲವಾರು ಪ್ರತಿಭಾನ್ವಿತರು ‘ಗನ್ಸ್ ಅಂಡ್ ರೋಸಸ್’ ಮೂಲಕ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ. ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಎಚ್.ಆರ್ ನಟರಾಜ್ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ (Yashvika Nishkala) ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಇದೀಗ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿದೆ.

Share This Article