ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಜಲಪಾತಕ್ಕೆ ದಾರಿಯೇ ಇಲ್ಲ
-ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾನನ ಮರೆಯಲ್ಲೇ ಉಳಿದ ಜಲಸೊಬಗು
ವಿಜಯ್ ಜಾಗಟಗಲ್
ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬೇಸಿಗೆಯ ಬಿಸಿಲ ಬೇಗೆ ಜನರನ್ನ ಆಗಲೇ ತತ್ತರಿಸುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನ ಪರದಾಡುತ್ತಿದ್ದಾರೆ. ಬರಗಾಲದಿಂದ ಹಳ್ಳ,ಕೊಳ್ಳ,ಕೆರೆಗಳು ಬತ್ತಿವೆ. ಇಷ್ಟಾದ್ರೂ ರಾಯಚೂರಿನಲ್ಲೊಂದು ಜೀವಂತ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಅಚ್ಚರಿ ಮೂಡಿಸಿದೆ.
Advertisement
Advertisement
ಕಲ್ಲು ಬಂಡೆಗಳ ಮೈಮೇಲೆ ಮೆಲ್ಲನೆ ಹರಿದು ರಮಣೀಯ ದೃಶ್ಯಕಾವ್ಯ ಸೃಷ್ಠಿಸಿರುವ ಇಲ್ಲಿನ ಜಲಸೋಬಗನ್ನ ನೋಡಿದ್ರೆ ಒಂದು ಕ್ಷಣ ಮಲೆನಾಡಿನ ಪ್ರಕೃತಿ ಸೌಂದರ್ಯದ ಚಿತ್ರಗಳು ಕಣ್ಮುಂದೆ ಬರದೇ ಇರಲ್ಲ. ಇದು ಬರಗಾಲದಿಂದ ತತ್ತರಿಸಿರುವ ಬಿರುಬೇಸಿಗೆಯ ನಾಡು ರಾಯಚೂರು ಜಿಲ್ಲೆಯ ಗುಂಡಲಬಂಡೆ ಜಲಪಾತ ಅನ್ನೋ ಸತ್ಯ ಮಾತ್ರ ನಿಜಕ್ಕೂ ಅಚ್ಚರಿ ತರಿಸುತ್ತೆ. ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿಯಿರುವ ಈ ಜಲಪಾತದ ಬಂಡೆಯೊಂದಕ್ಕೆ ಸಿಡಿಲು ಬಡಿದಿದ್ದರಿಂದ ‘ಸಿಡಿಲುಬಂಡೆ’ ಜಲಪಾತ ಅಂತಲೂ ಕರೆಯುತ್ತಾರೆ.
Advertisement
Advertisement
ಹತ್ತು ವರ್ಷಗಳಿಂದ ಬೆಳಕಿಗೆ ಬರುತ್ತಿರುವ ಈ ಜಲಪಾತ ಮೊದಲು ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆ ಕಾಲುವೆಯ ಬಸಿನೀರು ಸೇರಿಕೊಂಡು ಈಗ ಜಲಪಾತ 90 ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಂದ 10 ಕಿ.ಮೀ ದೂರದಲ್ಲಿ ಐದಾರು ಹಳ್ಳಗಳು ಒಂದೆಡೆ ಸೇರುವ ಸ್ಥಳದಿಂದ ಉಗಮವಾಗುವ ಜಲಪಾತದ ಮೂಲ ಪುನಃ ಹಳ್ಳಗಳ ಮೂಲಕ ಹರಿದು ಕೃಷ್ಣಾನದಿಗೆ ಸೇರುತ್ತಿದೆ. ಆದ್ರೆ ಇಲ್ಲೊಂದು ಸುಂದರ ಜಲಪಾತವಿದೆ ಅಂತ ಜಿಲ್ಲೆಯ ಎಷ್ಟೋ ಜನರಿಗೇ ಗೊತ್ತೇ ಇಲ್ಲಾ.
ಜಲಪಾತದ ಇರುವು ಇನ್ನೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೂ ಬಂದಿಲ್ಲ. ಕಾಡಿನ ಮಧ್ಯೆ ದುರ್ಗಮ ರಸ್ತೆಯಲ್ಲಿ ತೆರಳಿದರೆ ಸಿಗುವ ಜಲಪಾತದ ಬಳಿ ಹೋಗುವುದೇ ಒಂದು ಸಾಹಸವಾಗಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ. ಜಿಲ್ಲೆಯ ಏಕೈಕ ಸುಂದರ ಪ್ರವಾಸಿ ಸ್ಥಳವಾಗಿರುವ ಗುಂಡಲಬಂಡೆ ಜಲಪಾತ ಪ್ರದೇಶದ ಅಭಿವೃದ್ದಿ ಅವಶ್ಯವಾಗಿದೆ. ಅಲ್ಲದೆ ಎತ್ತರದಿಂದ ನೀರು ಧುಮ್ಮುಕ್ಕುವುದರಿಂದ ವಿದ್ಯುತ್ ಉತ್ಪಾದನೆಗೂ ಅವಕಾಶಗಳಿವೆ.
ಭಾನುವಾರ ಹಾಗೂ ರಜಾ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಾಡಿನಲ್ಲಿ ಒಂದೂವರೆ ಕಿ.ಮೀ ದುರ್ಗಮ ದಾರಿ ಬಳಿಕ ಸಿಗುವ ಈ ಜಲಪಾತ ಬಂಡೆಗಳ ಗುಡ್ಡದಲ್ಲಿ ಹರಿಯುವುದರಿಂದ ಇಲ್ಲಿನ ಕಲ್ಲುಗಳು ಜಾರುತ್ತವೆ. ಅಲ್ಲದೆ ಅಲ್ಲಲ್ಲಿ ಅಪಾಯದ ಸ್ಥಳಗಳಿವೆ, ಮೊದಲಬಾರಿ ಇಲ್ಲಿಗೆ ಬರುವವರು ಮುನ್ನೆಚ್ಚರಿಕೆಯಿಲ್ಲದೆ ಓಡಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಪ್ರವಾಸಿಗರಿಗೆ ಇಲ್ಲಿ ಜಲಪಾತದ ಕುರಿತ ನಾಮಫಲಕಗಳನ್ನ ಅಳವಡಿಸಬೇಕಿದೆ.
ಜಿಲ್ಲೆಯ ಶಾಸಕರು, ಸಂಸದರು ಪ್ರಸ್ತಾವನೆ ಸಲ್ಲಿಸಿದರೆ ಜಲಪಾತ ಅಭಿವೃದ್ದಿಗೆ ಮುಂದಾಗುತ್ತೇವೆ ಅಂತ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಹೇಳುತ್ತಿದ್ದಾರೆ. ಆದ್ರೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿನ ಇಚ್ಚಾಶಕ್ತಿ ಕೊರತೆಯಿಂದ ಸುಂದರ ತಾಣವೊಂದು ಜನರಿಂದ ದೂರ ಉಳಿದಿದೆ. ಕನಿಷ್ಠ ಈಗಲಾದ್ರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜಲಪಾತ ಅಭಿವೃದ್ದಿಗೆ ಮುಂದಾಗಬೇಕಿದೆ. ಜಿಲ್ಲೆಯ ಏಕೈಕ ಪ್ರವಾಸಿ ತಾಣವನ್ನ ಅಭಿವೃದ್ಧಿ ಪಡಿಸಬೇಕಿದೆ.