ಹುಬ್ಬಳ್ಳಿ: ಜೈನ ಸಮಾಜದ ನಿಗಮ ಮಂಡಳಿ ಸ್ಥಾಪನೆಯಲ್ಲಿ ಹಾಗೂ ಜೈನ್ ಧರ್ಮ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಅಂತ ಆರೋಪಿಸಿ, ರಾಷ್ಟ್ರಸಂತ, ಜೈನ ಮುನಿ ಗುಣಧರನಂದಿ ಮಹಾರಾಜ ಕಣ್ಣೀರು ಹಾಕಿದ್ದಾರೆ.
ಹುಬ್ಬಳ್ಳಿ ಸಮೀಪದ ವರೂರು ತೀರ್ಥಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಣ್ಣೀರು ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಜೈನ ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭರವಸೆ ನೀಡಿತ್ತು. ಆದ್ರೆ, ಇದುವರೆಗೆ ಮೂರು ಬೇಡಿಕೆಗಳು ಮಾತ್ರ ಈಡೇರಿವೆ. ನಿಗಮ-ಮಂಡಳಿ ಸೇರಿದಂತೆ ಇನ್ನೂ ನಾಲ್ಕು ಬೇಡಿಕೆಗಳು ಬಾಕಿ ಉಳಿದಿವೆ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಿಗಮ-ಮಂಡಳಿ ರಚನೆಯ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ, ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರ ಹೊರಹಾಕಿದರು.
ಬುಧವಾರ ಬೆಳಗ್ಗೆ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿಯಾಗಿ, ನಿಗಮ- ಮಂಡಳಿ ರಚನೆಗೆ ಮನವಿ ನೀಡಲಾಗುತ್ತದೆ. ಎಲ್ಲ ಸಚಿವರನ್ನು ಭೇಟಿಯಾಗಿ, ಸಮಾಜದ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ, ಜೂ.8 ರಂದು ಅಥಣಿ ತಾಲೂಕಿನ ಐನಾಪೂರದಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಆಯೋಜಿಸಲಾಗುವುದು. ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿದರೆ ಬೆಂಗಳೂರಿನ ವಿಧಾನಸೌಧದ ಎದುರು ಅನ್ನ, ನೀರು ತ್ಯಜಿಸುವ ಮೂಲಕ ಸಲ್ಲೇಖನ ವೃತ ಕೈಗೊಳ್ಳುವುದಾಗಿ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.